ನವದೆಹಲಿ:ಕೃತಕ ಬುದ್ಧಿಮತ್ತೆ (AI) ಮತ್ತು ಜನರೇಟಿವ್ AI (GenAI)ಗಳ ಅಳವಡಿಕೆಯು ವಿಶ್ವಾದ್ಯಂತ ಹೆಚ್ಚಾಗುತ್ತಿದ್ದಂತೆ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ವೇಗಗೊಳಿಸಲು ಮತ್ತು ಅದರ ಬಳಕೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ದೂರಸಂಪರ್ಕ ಇಲಾಖೆಯ (DoT) ಕಾರ್ಯದರ್ಶಿ ಡಾ.ನೀರಜ್ ಮಿತ್ತಲ್ ಪ್ರತಿಕ್ರಿಯಿಸಿ, ಜಾಗತಿಕವಾಗಿ AI ಮತ್ತು GenAI ವೇಗವಾಗಿ ವಿಕಸನಗೊಳ್ಳುತ್ತಿವೆ. ಪ್ರಪಂಚ ಅದರ ಗಮನಾರ್ಹ ಸಾಮರ್ಥ್ಯವನ್ನು ವೀಕ್ಷಿಸುತ್ತಿದೆ ಎಂದು ಹೇಳಿದ್ದಾರೆ.
ಈ ವರ್ಷ ಭಾರತ 'ವರ್ಲ್ಡ್ ಟೆಲಿಕಾಂ ಸ್ಟ್ಯಾಂಡರ್ಡೈಸೇಶನ್ ಟೆಲಿಕಾಂ ಅಸೆಂಬ್ಲಿ' (WTSA-2024) ಜೊತೆಗೆ ಮೊಬೈಲ್ ಕಾಂಗ್ರೆಸ್ (IMC) 2024 ಅನ್ನು ನವದೆಹಲಿಯಲ್ಲಿ ಆಯೋಜಿಸುತ್ತದೆ. ಅಲ್ಲಿ WTSA-2024 AI ಸೇರಿದಂತೆ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನಗಳ ಪ್ರಮಾಣೀಕರಣ ಅಭ್ಯಾಸಗಳನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಮಿತ್ತಲ್ ತಿಳಿಸಿದರು.
ಅಕ್ಟೋಬರ್ 15ರಿಂದ ಅ.18ರವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ IMC 2024 ನಡಯಲಿದೆ. 50ಕ್ಕೂ ಹೆಚ್ಚು ಜಾಗತಿಕ ಮತ್ತು ಭಾರತೀಯ ತಜ್ಞರು AI ಮತ್ತು GenAI ಕುರಿತು ಚರ್ಚಿಸಲಿದ್ದಾರೆ. IMC 2024 ಮತ್ತು ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಶನ್ ಯೂನಿಯನ್ (ITU) ಕೂಡ 'AI ಫಾರ್ ಗುಡ್' ಕುರಿತು ವಿಶೇಷ ದಿನದ ಅಧಿವೇಶನವನ್ನು ಆಯೋಜಿಸುತ್ತದೆ. ಅಲ್ಲಿ ಪ್ರಪಂಚಾದ್ಯಂತದ ತಜ್ಞರು ಮತ್ತು ಪ್ರತಿನಿಧಿಗಳು ಈ ವಿಷಯದ ಬಗ್ಗೆ ಚರ್ಚಿಸುತ್ತಾರೆ.