ನವದೆಹಲಿ:ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಮಂಗಳ ಗ್ರಹದ ಮೇಲೆ 1 ಲಕ್ಷ ಜನರನ್ನು ಸಾಗಿಸುವ ದೃಷ್ಟಿಕೋನವನ್ನು ಅನಾವರಣಗೊಳಿಸಿದ್ದಾರೆ. ಇದು ಭೂಮಿ ಮಾತ್ರವಲ್ಲದೆ ಇನ್ನೂ ಹಲವಾರು ಗ್ರಹಗಳ ಮೇಲೆ ಮಾನವಕುಲ ವಾಸಿಸುವಂತೆ ಮಾಡುವ ಮಸ್ಕ್ ಅವರ ದೂರಗಾಮಿ ದೃಷ್ಟಿಕೋನದ ಭಾಗವಾಗಿದೆ.
ಮಸ್ಕ್ ತಮ್ಮ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದೇ ಗ್ರಹದ ಮೇಲೆ ಮಾನವಕುಲ ವಾಸಿಸುವ ಅನಿವಾರ್ಯತೆಯನ್ನು ನಿವಾರಿಸುವ ಅಗತ್ಯದ ಬಗ್ಗೆ ಅವರು ಒತ್ತಿ ಹೇಳಿದರು. ಒಂದೊಮ್ಮೆ ಭೂಮಿಯು ಮಾನವರ ವಾಸಕ್ಕೆ ಅಯೋಗ್ಯವಾದಲ್ಲಿ ನಾಗರಿಕತೆಯ ಉಳಿವನ್ನು ಖಚಿತಪಡಿಸಿಕೊಳ್ಳಲು ಸಂಭಾವ್ಯ ಬ್ಯಾಕಪ್ ಆಗಿ ಅವರು ಮಂಗಳ ಗ್ರಹವನ್ನು ಕಲ್ಪಿಸಿಕೊಂಡಿದ್ದಾರೆ.
"ಭೂಮಿಯಿಂದ ಬರುವ ಎಲ್ಲ ಅಗತ್ಯ ವಸ್ತುಗಳ ಪೂರೈಕೆಗಳು ನಿಂತಾಗಲೂ ಮಂಗಳ ಗ್ರಹದ ಮೇಲೆ ಮಾನವರು ಬದುಕುಳಿಯಲು ಸಾಧ್ಯವಾದರೆ ಮಾತ್ರ ನಾಗರಿಕತೆಯು ಏಕ-ಗ್ರಹ ಅನಿವಾರ್ಯತೆಯಿಂದ ಪಾರಾಗುತ್ತದೆ" ಎಂದು ಅವರು ಹೇಳಿದರು. ಈ ಅಭೂತಪೂರ್ವ ಸಾಹಸದಲ್ಲಿ ಸ್ಪೇಸ್ಎಕ್ಸ್ ನ ಸ್ಟಾರ್ಶಿಪ್ ನೌಕೆಗಳು ಪ್ರಮುಖ ಪಾತ್ರ ವಹಿಸಲಿದ್ದು, ಪ್ರತಿದಿನ ಊರಿಂದೂರಿಗೆ ಹೋಗುವಂತೆ ನಾವು ಮಂಗಳ ಗ್ರಹಕ್ಕೆ ಹೋಗಿ ಬರಬಹುದು ಎಂಬುದು ಮಸ್ಕ್ ಅವರ ರೋಮಾಂಚಕ ಕಲ್ಪನೆಯಾಗಿದೆ.
ಮಂಗಳ ಗ್ರಹದಲ್ಲಿ ಮಾನವರ ವಸಾಹತು ಸ್ಥಾಪಿಸುವಲ್ಲಿಗೆ ಎಲೋನ್ ಮಸ್ಕ್ ಅವರ ಆಕಾಂಕ್ಷೆಗಳು ಕೊನೆಗೊಳ್ಳುವುದಿಲ್ಲ. ಚಂದ್ರನ ಮೇಲೆಯೂ ಮಾನವರನ್ನು ನೆಲೆಸುವ ಯೋಚನೆ ಅವರದ್ದಾಗಿದೆ. ಮುಂದಿನ ಐದು ವರ್ಷಗಳಲ್ಲಿ ಸ್ಪೇಸ್ಎಕ್ಸ್ನ ಸ್ಟಾರ್ಶಿಪ್ ಚಂದ್ರನ ಪ್ರವಾಸಗಳನ್ನು ಮಾಡಲಿದೆ ಎಂದು ನಿರೀಕ್ಷಿಸಿರುವ ಮಸ್ಕ್, ಚಂದ್ರ ಮತ್ತು ಮಂಗಳ ಎರಡರಲ್ಲೂ ಮಾನವರು ವಾಸಿಸುವ ಭವಿಷ್ಯವನ್ನು ಊಹಿಸಿದ್ದಾರೆ. ಬಾಹ್ಯಾಕಾಶ ಪ್ರಯಾಣದ ಗಡಿಗಳನ್ನು ವಿಸ್ತರಿಸುವಲ್ಲಿ ಮಸ್ಕ್ ಅವರ ಟ್ರ್ಯಾಕ್ ರೆಕಾರ್ಡ್ ಅವರ ದೀರ್ಘಕಾಲೀನ ದೃಷ್ಟಿಕೋನದ ಕಾರ್ಯಸಾಧ್ಯತೆಯ ಬಗ್ಗೆ ವಿಶ್ವಾಸ ಮೂಡಿಸುತ್ತದೆ.
ಈ ಧೈರ್ಯಶಾಲಿ ಯೋಜನೆಯು ಭೂಮಿಯನ್ನು ಹೊರತುಪಡಿಸಿ ಅನೇಕ ಗ್ರಹಗಳ ಮೇಲೆ ವಸಾಹತುಗಳನ್ನು ಸ್ಥಾಪಿಸುವ ಮೂಲಕ ಮಾನವೀಯತೆಯ ಉಳಿವನ್ನು ಭದ್ರಪಡಿಸುವ ಮಸ್ಕ್ ಅವರ ದೂರದೃಷ್ಟಿಯೊಂದಿಗೆ ಹೊಂದಿಕೆಯಾಗುತ್ತದೆ. ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ರಾಕೆಟ್ ಎಂದು ಗುರುತಿಸಲ್ಪಟ್ಟ ಸ್ಪೇಸ್ಎಕ್ಸ್ ಸ್ಟಾರ್ಶಿಪ್ನ ನಿರಂತರ ಅಭಿವೃದ್ಧಿಯು ಬಾಹ್ಯಾಕಾಶ ಪರಿಶೋಧನಾ ತಂತ್ರಜ್ಞಾನವನ್ನು ಮುನ್ನಡೆಸುವ ಮತ್ತು ಭೂಮಿಯ ಆಚೆಗೆ ಮಾನವೀಯತೆಯ ವ್ಯಾಪ್ತಿಯನ್ನು ವಿಸ್ತರಿಸುವ ಮಸ್ಕ್ ಅವರ ಮಹತ್ವಾಕಾಂಕ್ಷೆಯ ಗುರಿಗಳಿಗೆ ಕೇಂದ್ರ ಬಿಂದುವಾಗಿದೆ. ಅಸಾಧಾರಣ ಸವಾಲುಗಳ ಹೊರತಾಗಿಯೂ ಅವರು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ವಿಶ್ವಾಸ ಹೊಂದಿದ್ದಾರೆ.
ಇದನ್ನೂ ಓದಿ : ಸೈಬರ್ ವಂಚನೆಯಲ್ಲಿ ಭಾಗಿಯಾದ 1.4 ಲಕ್ಷ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಿದ ಸರ್ಕಾರ