ನವದೆಹಲಿ: ಸೈಬರ್ ಅಪರಾಧ ಅಥವಾ ಆರ್ಥಿಕ ವಂಚನೆಗಳಿಗಾಗಿ ಬಳಸಲ್ಪಟ್ಟ ಸುಮಾರು 1.4 ಲಕ್ಷ ಮೊಬೈಲ್ ಸಂಖ್ಯೆಗಳನ್ನು ನಿರ್ಬಂಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಹಣಕಾಸು ಕ್ಷೇತ್ರದಲ್ಲಿ ಸೈಬರ್ ಭದ್ರತೆ ಕುರಿತು ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ.
ಬಲ್ಕ್ ಎಸ್ಎಂಎಸ್ಗಳನ್ನು ಕಳುಹಿಸುವ 35 ಲಕ್ಷ ಪ್ರಮುಖ ಘಟಕಗಳನ್ನು (Principal Entities -PEs) ಇದಕ್ಕಾಗಿ ದೂರಸಂಪರ್ಕ ಇಲಾಖೆ (ಡಿಒಟಿ) ವಿಶ್ಲೇಷಿಸಿದೆ. ಈ ಪೈಕಿ ದುರುದ್ದೇಶಪೂರಿತ ಎಸ್ಎಂಎಸ್ಗಳನ್ನು ಕಳುಹಿಸುವಲ್ಲಿ ಭಾಗಿಯಾಗಿರುವ 19,776 ಪ್ರಮುಖ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಮತ್ತು 30,700 ಎಸ್ಎಂಎಸ್ ಹೆಡರ್ಗಳು ಮತ್ತು 1,95,766 ಎಸ್ಎಂಎಸ್ ಟೆಂಪ್ಲೇಟ್ಗಳ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಸೈಬರ್ ವಂಚನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ, 500 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ, ಸುಮಾರು 3.08 ಲಕ್ಷ ಸಿಮ್ ಹಾಗೂ ಸುಮಾರು 50,000 ಐಎಂಇಐ ನಂಬರ್ಗಳನ್ನು ನಿರ್ಬಂಧಿಸಲಾಗಿದೆ ಮತ್ತು ಏಪ್ರಿಲ್ 2023 ರಿಂದ 592 ನಕಲಿ ಲಿಂಕ್ಗಳು/ ಎಪಿಕೆ, 2,194 ಯುಆರ್ಎಲ್ಗಳನ್ನು ನಿರ್ಬಂಧಿಸಲಾಗಿದೆ.
ಎಪಿಐ ಏಕೀಕರಣದ ಮೂಲಕ ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಅಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್ (CFCFRMS) ಪ್ಲಾಟ್ಫಾರ್ಮ್ಗೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಸಂಯೋಜಿಸುವ ವಿಚಾರಗಳನ್ನು ಕೂಡ ಸಭೆಯಲ್ಲಿ ಚರ್ಚಿಸಲಾಯಿತು.
ಪೊಲೀಸರು, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ನಡುವೆ ಪರಿಣಾಮಕಾರಿ ಸಹಯೋಗವನ್ನು ಸಕ್ರಿಯಗೊಳಿಸುವ ವೇದಿಕೆಯೊಂದನ್ನು ಕೇಂದ್ರೀಕರಿಸಲು ಸಿಎಫ್ಸಿಎಫ್ಆರ್ಎಂಎಸ್ ಪ್ಲಾಟ್ಫಾರ್ಮ್ ಅನ್ನು ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್ಸಿಆರ್ಪಿ) ಯೊಂದಿಗೆ ಸಂಯೋಜಿಸುವುದು, ಮೋಸದ ಚಟುವಟಿಕೆಗಳ ನೈಜ ಸಮಯದ ಮೇಲ್ವಿಚಾರಣೆ ಮತ್ತು ತಡೆಗಟ್ಟುವಿಕೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಸರ್ಕಾರ ತಿಳಿಸಿದೆ.
ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು 10-ಅಂಕಿಯ ಮೊಬೈಲ್ ಸಂಖ್ಯೆಗಳ ಬಳಕೆಯನ್ನು ಹಂತ ಹಂತವಾಗಿ ನಿಲ್ಲಿಸಬೇಕು ಮತ್ತು ಟ್ರಾಯ್ ಸೂಚಿಸಿದಂತೆ ವಾಣಿಜ್ಯ ಅಥವಾ ಪ್ರಚಾರ ಚಟುವಟಿಕೆಗಳಿಗೆ '140xxx' ನಂತಹ ನಿರ್ದಿಷ್ಟ ಸಂಖ್ಯಾ ಸರಣಿಯನ್ನು ಬಳಸಲಾರಂಭಿಸಬೇಕೆಂಬ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ನಕಲಿ ದಾಖಲೆಗಳನ್ನು ನೀಡಿ ತೆಗೆದುಕೊಂಡ ಮೊಬೈಲ್ ಸಂಪರ್ಕಗಳನ್ನು ಪತ್ತೆಹಚ್ಚಲು ಡಿಒಟಿ ಎಐ-ಯಂತ್ರ ಕಲಿಕೆ ಆಧಾರಿತ ಎಎಸ್ಟಿಆರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಇದನ್ನೂ ಓದಿ : ಚಂದ್ರನತ್ತ ಮತ್ತೆ ನಾಸಾ ಚಿತ್ತ: ವ್ಯಾಲೆಂಟೈನ್ಸ್ ದಿನ ನಭಕ್ಕೆ ಚಿಮ್ಮಲಿದೆ ಐಎಂ-1 ಲ್ಯಾಂಡರ್