ಚೆನ್ನೈ( ತಮಿಳುನಾಡು): ಬಾಹ್ಯಾಕಾಶ ಕ್ಷೇತ್ರ ಇದೀಗ ಸಂಶೋಧನೆಗೆ ಮಾತ್ರ ಸಿಮೀತವಾಗಿಲ್ಲ. ಇದೀಗ ಅದು ಉದ್ಯಮವಾಗಿ ಬೆಳವಣಿಗೆ ಕಾಣುತ್ತಿದೆ. ಬಾಹ್ಯಾಕಾಶ ಪರಿಶೋಧನೆಯು ಈ ಶತಮಾನದ ಆರಂಭದಲ್ಲಿ ಅಷ್ಟೊಂದು ಪ್ರಸಿದ್ಧಿಯನ್ನೇನು ಪಡೆದುಕೊಂಡಿರಲಿಲ್ಲ. ನಕ್ಷತ್ರಗಳು, ಉಪಗ್ರಹಗಳು ಮತ್ತು ಗ್ರಹಗಳು ISRO ಮತ್ತು NASA ಗಳಿಗೆ ಮಾತ್ರ ನಿರ್ದಿಷ್ಟವಾದ ವೈಜ್ಞಾನಿಕ ವಿಷಯಗಳಾಗಿದ್ದವು. ಆದರೆ ಇಂದು ಅವುಗಳ ಬಗ್ಗೆ ಜನಸಾಮಾನ್ಯನೂ ಗಮನಕೊಡುತ್ತಿದ್ದಾನೆ. ಆ ವಿದ್ಯಮಾನಗಳ ಮೇಲೆ ಆಸಕ್ತಿ ಹೊಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಾಹ್ಯಾಕಾಶ ವಿಜ್ಞಾನದಲ್ಲಿ ಕೇವಲ ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರಗಳು ಮಾತ್ರವೇ ಸಂಶೋಧನೆ ಮಾಡುತ್ತಿಲ್ಲ. ಅಲ್ಲೀಗ ಖಾಸಗಿ ಸಂಸ್ಥೆಗಳು ಪ್ರವೇಶ ಪಡೆದಿವೆ. ಬಾಹ್ಯಾಕಾಶ ಸಂಶೋಧನೆ ಮತ್ತು ಅನುಸಂಧಾನದಲ್ಲಿ ಅಮೂಲಾಗ್ರ ಬದಲಾವಣೆ ಕಾಣುತ್ತಿದೆ. ಭಾರತದಲ್ಲಿ ಅಂತಹ ಒಂದು ಇತ್ತೀಚಿನ ಬೆಳವಣಿಗೆಯೆಂದರೆ ಬಾಹ್ಯಾಕಾಶ ಸಂಶೋಧನೆಯ ಕೆಲವು ವಲಯಗಳಲ್ಲಿ ಸರ್ಕಾರ ಶೇ 100ರಷ್ಟು ವಿದೇಶಿ ನೇರ ಹೂಡಿಕೆ - ಎಫ್‌ಡಿಐಗೆ ಅವಕಾಶ ಮಾಡಿಕೊಟ್ಟಿದೆ. ಇದು ಹಲವು ಅವಕಾಶಗಳ ಬಾಗಿಲನ್ನೇ ತರೆದಿಟ್ಟಿದೆ. ಬಾಹ್ಯಾಕಾಶದಲ್ಲಿ ಭಾರತೀಯ ಕಂಪನಿಗಳಲ್ಲಿ ಹೂಡಿಕೆ ಮಾಡಲು ವಿದೇಶಿ ಹೂಡಿಕೆದಾರರು ಮುಂದೆ ಬರುವ ಸಾಧ್ಯತೆಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಇಸ್ರೋದ ಮಾಜಿ ನಿರ್ದೇಶಕ ಮತ್ತು ಮೂನ್ ಮ್ಯಾನ್ ಆಫ್ ಇಂಡಿಯಾ ಎಂದೇ ಪ್ರಸಿದ್ಧಿ ಪಡೆದಿರುವ ಡಾ. ಮೈಲ್‌ಸ್ವಾಮಿ ಅಣ್ಣಾದೊರೈ ಅವರ ಜತೆ ETV ಭಾರತದ ಶಂಕರನಾರಾಯಣನ್ ಸುದಲೈ ಅವರು ಸಂದರ್ಶನ ನಡೆಸಿದ್ದಾರೆ. ಬಾಹ್ಯಾಕಾಶ ಕ್ಷೇತ್ರ ಹಾಗೂ ಅದರ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ ಹಾಗೂ ಈ ಕ್ಷೇತ್ರದಲ್ಲಿ ಯುವಕರಿಗೆ ಹೇಗೆಲ್ಲ ಉಪಯೋಗ ಆಗುತ್ತದೆ. ಅವರ ವೃತ್ತಿಜೀವನಕ್ಕೆ ಹೇಗೆಲ್ಲ ನೆರವಾಗುತ್ತದೆ ಎಂಬ ಬಗ್ಗೆ ತಮ್ಮದೇ ಆದ ದೃಷ್ಟಿಕೋನವನ್ನು ಮತ್ತು ಅವಕಾಶಗಳ ಬಾಗಿಲು ಹೇಗೆಲ್ಲ ತೆರೆಯುತ್ತದೆ ಎಂಬುದರ ಬಗ್ಗೆ ಅಣ್ಣಾದೊರೈ ವಿವರಿಸಿದ್ದಾರೆ.
ಸಂದರ್ಶನದ ಆಯ್ದ ಭಾಗಗಳು:
ಈಟಿವಿ ಭಾರತ:ಕೇಂದ್ರ ಸರ್ಕಾರವು ಬಾಹ್ಯಾಕಾಶ ಸಂಶೋಧನೆಯ ಕೆಲವು ವಲಯಗಳಲ್ಲಿ ಶೇ 100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡಿದೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಯಾವೆಲ್ಲ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ ಎಂದು ನೀವು ಭಾವಿಸುತ್ತೀರಾ?
ಡಾ. ಅಣ್ಣಾದೊರೈ:ಇತ್ತೀಚಿನ ಉದಾಹರಣೆಯನ್ನೇ ನಾವು ಗಮನಕ್ಕೆ ತೆಗದುಕೊಳ್ಳುವುದಾದರೆ, ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತದ ಏರೋಸ್ಪೇಸ್ ಅಂದರೆ ಬಾಹ್ಯಾಕಾಶ ಕ್ಷೇತ್ರವು ಭಾರಿ ಪ್ರಗತಿಯನ್ನ ಕಂಡಿದೆ. ಕಳೆದ 65 ವರ್ಷಗಳಲ್ಲಿ ಉಡಾವಣೆಯಾದ ಉಪಗ್ರಹಗಳ ಪೈಕಿ ಶೇಕಡಾ 40 ಕ್ಕಿಂತ ಹೆಚ್ಚು ಉಪಗ್ರಹಗಳನ್ನು ಸಾಂಕ್ರಾಮಿಕದ ಬಳಿಕ ಅಂದರೆ ಕಳೆದ ಮೂರು ವರ್ಷಗಳಲ್ಲಿ ಉಡ್ಡಯನ ಮಾಡಲಾಗಿದೆ. ಮುಖ್ಯವಾಗಿ ಶೇ 90ರಷ್ಟು ಉಪಗ್ರಹಗಳನ್ನು ಎಲೋನ್ ಮಸ್ಕ್‌ರ ಸ್ಪೇಸ್‌ಎಕ್ಸ್ ಮತ್ತು ಒನ್ ವೆಬ್‌ನಂತಹ ಖಾಸಗಿ ಬಾಹ್ಯಾಕಾಶ ಕಂಪನಿಗಳು ಬಾಹ್ಯಾಕಾಶಕ್ಕೆ ಕಳುಹಿಸಿವೆ. ಭಾರತದ ಮಟ್ಟಿಗೆ ಹೇಳುವುದಾದರೆ ಬಾಹ್ಯಾಕಾಶ ಕ್ಷೇತ್ರವನ್ನು ಸರ್ಕಾರ ನಡೆಸುತ್ತಿದ್ದರೂ ಸಾಕಷ್ಟು ಪ್ರಗತಿಪರ ಸಂಶೋಧನೆಗಳು ನಡೆಯುತ್ತಿವೆ. ನಾವು ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸುತ್ತಿದ್ದೇವೆ. ನಮಗೆ ಅಗತ್ಯವಿರುವ ಅನೇಕ ಉಪಗ್ರಹಗಳನ್ನ ಸ್ವತಃ ನಾವೇ ನಿರ್ಮಿಸಿಕೊಂಡಿದ್ದೇವೆ. ವಿದೇಶಿ ಹೂಡಿಕೆಯು ವಾಣಿಜ್ಯಿಕವಾಗಿ ಪ್ರಗತಿಯನ್ನು ಕಾಣುತ್ತಿದೆ ಎಂದು ನಾನು ನಂಬುತ್ತೇನೆ.
ಏರೋಪ್ಲೇನ್ಗಳು ಒಂದು ಕಾಲದಲ್ಲಿ ವಾಯುಪಡೆಗೆ ಮಾತ್ರವೇ ಸೀಮಿತವಾಗಿದ್ದವು. ಆದರೆ ಕಾಲಾನಂತರ ಸಾರ್ವಜನಿಕರು ಅವುಗಳನ್ನು ಬಳಸುವಂತಾಯಿತು. ಇದೀಗ ವಾಯುಯಾನ ಕ್ಷೇತ್ರ ಜನಪ್ರಿಯವಾಗಿದ್ದು, ಜೀವನದ ಅವಿಭಾಜ್ಯ ಅಂಗವಾಗುವತ್ತ ಮುನ್ನುಗ್ಗುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ಬಹುತೇಕ ಇದೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಬೇರೆ ದೇಶಗಳು ಇದರಲ್ಲಿ ಮುಂಚೂಣಿಯಲ್ಲಿದ್ದರೂ ಭಾರತ ಸಹ ಹಿಂದೇನೂ ಉಳಿದಿಲ್ಲ. ಇಲ್ಲೂ ಭಾರಿ ಬದಲಾವಣೆಗಳು ವೇಗವಾಗಿ ನಡೆಯುತ್ತಿವೆ. ಕೇವಲ ಸರ್ಕಾರದ ಒಡೆತನದಲ್ಲಿದ್ದ ಬಾಹ್ಯಾಕಾಶ ಉದ್ಯಮದಲ್ಲಿ ಈಗ ಖಾಸಗಿ ವಲಯವೂ ಹೂಡಿಕೆ ಮಾಡುತ್ತಿದೆ. ಸಂಶೋಧನೆಗಳು ಭರದಿಂದ ಸಾಗಿವೆ. ಬಾಹ್ಯಾಕಾಶಕ್ಕೆ ಒಮ್ಮೆ ಹೋಗಿ ಬರಬೇಕು ಎಂಬ ಆಸೆ ಜನಸಾಮಾನ್ಯರಲ್ಲೂ ಹುಟ್ಟಿಕೊಳ್ಳುತ್ತಿದೆ.