ನವದೆಹಲಿ: ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಲು ಸಜ್ಜಾಗಿದ್ದ ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಇದೀಗ ತಮ್ಮ ಈ ಪ್ರವಾಸವನ್ನು ಮುಂದೂಡಿದ್ದಾರೆ. ಕಳೆದ ವಾರ ಭಾರತಕ್ಕೆ ಭೇಟಿ ನೀಡುವ ಕುರಿತು ಖಚಿತ ಪಡಿಸಿದ್ದ ಅವರು, ಇದೀಗ ತಮ್ಮ ಪ್ರವಾಸ ರದ್ದುಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ದೃಢಪಡಿಸಿದ್ದಾರೆ.
'ದುರಾದೃಷ್ಟವಶಾತ್ ಟೆಸ್ಲಾ ಬಾದ್ಯತೆಗಳ ಹಿನ್ನಲೆ ಭಾರತಕ್ಕೆ ಭೇಟಿ ನೀಡುವುದನ್ನು ಮುಂದೂಡುವ ಅಗತ್ಯ ಏರ್ಪಟಿದೆ. ಈ ವರ್ಷಾಂತ್ಯದಲ್ಲಿ ಭಾರತ ಪ್ರವಾಸ ಕುರಿತು ಯೋಚಿಸಲಾಗುವುದು' ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಈ ಮೊದಲು ವಿಶ್ವದ ಬಿಲೇನಿಯರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭೇಟಿ ಈ ತಿಂಗಳು ನಿಗದಿಯಾಗಿತ್ತು. ಈ ಕುರಿತು ಕಳೆದ ವಾರ ಟೆಸ್ಲಾ ಸಂಸ್ಥಾಪಕ ಕೂಡ ಎಕ್ಸ್ನಲ್ಲಿ ಖಚಿತಪಡಿಸಿದ್ದರು. ಈ ಭೇಟಿಯ ಮೂಲ ಉದ್ದೇಶ ಭಾರತದಲ್ಲಿ ಟೆಸ್ಲಾ ಇವಿ ಘಟಕ ಸ್ಥಾಪನೆಯಾಗಿತ್ತು. ಇದರ ಜೊತೆ ದೇಶದಲ್ಲಿ ತಮ್ಮ ಸಾಟಲೈಟ್ ಇಂಟರ್ನೆಟ್ ಸೇವೆ ಸ್ಟಾರ್ಲಿಂಕ್ ಪ್ರವೇಶ ಕುರಿತು ಕೂಡ ಚರ್ಚಿಸಲಿದ್ದಾರೆ ಎನ್ನಲಾಗಿತ್ತು. ಪ್ರಧಾನಿ ಭೇಟಿ ಹೊರತಾಗಿ ಮಸ್ಕ್ ಭಾರತೀಯ ಬಾಹ್ಯಾಕಾಶ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದರು.
ಟೆಸ್ಲಾ ತ್ರೈಮಾಸಿಕ ಫಲಿತಾಂಶ: ಇತ್ತೀಚೆಗೆ ಟೆಸ್ಲಾದ ಪ್ರಮುಖ ಮಾರುಕಟ್ಟೆಗಳಾದ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದಲ್ಲಿ ಮಾರಾಟ ಕುಗ್ಗಿದೆ. ಜಾಗತಿಕವಾಗಿ ಟೆಸ್ಲಾ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಶೇ 10ರಷ್ಟು ಅಂದರೆ 14 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದಾದ ಬಳಿಕದ ಟೆಸ್ಲಾದ ತ್ರೈಮಾಸಿಕ ಫಲಿತಾಂಶಗಳ ಕುರಿತು ವಿಶ್ಲೇಷಕರೊಂದಿಗೆ ಚರ್ಚೆ ನಡೆಸುವ ಹಿನ್ನೆಲೆಯಲ್ಲಿ ಮಸ್ಕ್ ಈ ಭೇಟಿ ಮುಂದೂಡಿದ್ದಾರೆ.
ಕಳಪೆ ಆರ್ಥಿಕ ಸಾಧನೆ ಹಿನ್ನೆಲೆ ಟೆಸ್ಲಾ, ಹಲವು ವಿಭಾಗದಲ್ಲಿ ಶೇ 20ರಷ್ಟು ಉದ್ಯೋಗ ಕಡಿಮೆ ಮಾಡಿತ್ತು. ಇದರಿಂದ ಸಂಸ್ಥೆಯ ಉತ್ತಮ ಕಾರ್ಯಕ್ಷಮತೆ ತೋರುವ ಉದ್ಯೋಗಿಗಳು ಕಂಪನಿ ತೊರೆಯುವ ಸ್ಥಿತಿ ಎದುರಾಯಿತು. ಟೆಸ್ಲಾದ ಹೈ ಪ್ರೊಫೈಲ್ ಕಾರ್ಯದರ್ಶಿಗಳಾಗಿದ್ದ ಸಾರ್ವಜನಿಕ ನೀತಿ ಮತ್ತು ವ್ಯವಹಾರ ಅಭಿವೃದ್ಧಿಯ ವಿಪಿ ರೋಹನ್ ಪಟೇಲ್ ಮತ್ತು ಟೆಸ್ಲಾದ ಪವರ್‌ಟ್ರೇನ್ ಮತ್ತು ಎನರ್ಜಿಯ ಎಸ್‌ವಿಪಿ ಡ್ರೂ ಬಾಗ್ಲಿನೊ ಸಹ ಹುದ್ದೆ ತ್ಯಜಿಸಿದ್ದರು.
ಅಷ್ಟೇ ಅಲ್ಲದೆ ಅಗ್ಗದ ದರದಲ್ಲಿ ಅಂದರೆ 25.000 ಡಾಲರ್ ಮೊತ್ತದಲ್ಲಿ ಇವಿ ಅಭಿವೃದ್ಧಿ ಮಾಡುವ ಯೋಜನೆಯನ್ನು ಸಂಸ್ಥೆ ಸ್ಥಗಿತಗೊಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಭಾರತಕ್ಕೆ ಟೆಸ್ಲಾ ಪ್ರವೇಶ: ಮೂಲ ಸೌಕರ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿ ನಿರೀಕ್ಷೆ