ನವದೆಹಲಿ: ಡಿಜಿಟಲ್ ಬಂಧನ ಎಂಬುದು ಸೈಬರ್ ಅಪರಾಧಿಗಳ ಹೊಸ ರೀತಿ ಕಾರ್ಯಾಚರಣೆಯಾಗಿದೆ. ಈ ಕುರಿತು ಕಾನೂನು ಜಾರಿ ನಿರ್ದೇಶನಾಲಯ ಜಾಗೃತಿ ಅಭಿಯಾನ ಮೂಡಿಸಿದ ಬಳಿಕವೂ ಈ ಅಪರಾಧ ಕಾರ್ಯಾಚರಣೆ ದೊಡ್ಡ ತಲೆ ನೋವಾಗಿದೆ. ಈ ಅಪರಾಧದಲ್ಲಿ ಸೈಬರ್ ಕ್ರಿಮಿನಲ್‌ಗಳು ನಕಲಿ ಪೊಲೀಸ್ ಅಥವಾ ನಕಲಿ ಸಿಬಿಐ ಅಧಿಕಾರಿಗಳಂತೆ ನಟಿಸುವ ಮೂಲಕ ಆನ್‌ಲೈನ್‌ನಲ್ಲಿ ಜನರನ್ನು ವಂಚಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಈ ಕುರಿತು ನಾವು ಪರಿಶೀಲಿಸುತ್ತಿದ್ದೇವೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ನಿರ್ದೇಶಕ ನಿಶಾಂತ್ ಕುಮಾರ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಸೈಬರ್ ವಂಚನೆ ಮೂಲಕ ಜನರನ್ನು ಆರ್ಥಿಕವಾಗಿ ವಂಚಿಸುತ್ತಿರುವ ಪ್ರಕರಣಗಳು ದಾಖಲಾಗುತ್ತಿದೆ. ಈ ಹಿನ್ನೆಲೆ ಎಲ್ಲಾ ರೀತಿಯ ಸೈಬರ್ ಆರ್ಥಿಕ ವಂಚನೆ ಕುರಿತು ಪೊಲೀಸರಿಗೆ ತಕ್ಷಣಕ್ಕೆ ತಿಳಿಸಲು ಸರ್ಕಾರ 1930 ಎಂಬ ಟೋಲ್ ಫ್ರಿ ಸಂಖ್ಯೆ ಆರಂಭಿಸಿದ್ದು, ಇಲ್ಲಿ ಕೂಡ ದೂರು ಸಲ್ಲಿಸಬಹುದು. ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಮೋಸದ ಜಾಲಕ್ಕೆ ಬೀಳದಂತೆ ಜನರು ಕೂಡ ಅಗತ್ಯ ಎಚ್ಚರಿಕೆವಹಿಸಬೇಕಿದೆ. ಈ ಕುರಿತು ಅರಿವು ಹೊಂದುವುದು ಅಗತ್ಯವಾಗಿದೆ ಎಂದರು.
ಹೊಸ ರೀತಿ ವಂಚನೆ ಕಾರ್ಯಾಚರಣೆ:ಡಿಜಿಟಲ್ ಗೃಹ ಬಂಧನ ಸದ್ಯ ಸೈಬರ್ ಅಪರಾಧಿಗಳ ಹೊಸ ರೀತಿಯ ವಂಚನೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಸೈಬರ್ ಅಪರಾಧಿಗಳು ತಮ್ಮನ್ನು ಪೊಲೀಸ್ ಅಧಿಕಾರಿಗಳಂತೆ ಬಿಂಬಿಸಿಕೊಳ್ಳುತ್ತಾರೆ. ಅಲ್ಲದೇ ಅದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸಿ, ಜನರು ನಂಬುವಂತೆ ಮಾಡುತ್ತಾರೆ ಎಂದು ಟಿಆರ್ಎಐ ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತರ ಬ್ಯಾಂಕ್ ಖಾತೆಯನ್ನು ಖಾಲಿ ಮಾಡುವ ಮುನ್ನ ಸಿಬಿಐ ಅಥವಾ ಕಸ್ಟಮ್ಸ್ ಅಧಿಕಾರಿಗಳಂತೆ ನಾಟಕವಾಡಿ ಅವರಲ್ಲಿ ಭಯ ಮೂಡಿಸಿ ಒತ್ತೆಯಾಳುವಾಗಿರಿಸಿಕೊಳ್ಳುತ್ತಾರೆ. ಇದಕ್ಕಾಗಿ ವಂಚಕರು ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ನಕಲಿ ಸ್ಕೈಪ್ ಖಾತೆಗಳನ್ನು ಸೃಷ್ಟಿಸುತ್ತಾರೆ. ಬಳಿಕ ಸಂತ್ರಸ್ತರ ಬ್ಯಾಂಕ್ ಖಾತೆಗಳಿಂದ ಎಲ್ಲಾ ಹಣವನ್ನು ದೋಚುತ್ತಾರೆ.
ಇತ್ತೀಚಿನ ಡಿಜಿಟಲ್ ಗೃಹ ಬಂಧನ ಪ್ರಕರಣಗಳು:ಮಾರ್ಚ್ನಲ್ಲಿ ದೆಹಲಿ, ಮುಂಬೈ, ಬೆಂಗಳೂರು ಮತ್ತು ಉತ್ತರ ಪ್ರದೇಶದಲ್ಲಿ ನಿವೃತ್ತ ಅಧಿಕಾರಿ ಸೇರಿದಂತೆ ವಿವಿಧ ಜನರನ್ನು ವಂಚಿಸಿ, ಕೋಟ್ಯಾಂತರ ರೂ ಹಣವನ್ನು ದೋಚಲಾಗಿದೆ. ಉತ್ತರ ಪ್ರದೇಶದ ವಾರಣಾಸಿಯ ಸೈಬರ್ ಕ್ರೈಂ ಪೊಲೀಸರು ಈ ರೀತಿಯ ಡಿಜಿಟಲ್ ಗೃಹಬಂಧನ ವಂಚನೆಯಲ್ಲಿ ತೊಡಗಿದ್ದ ಎಂಟು ಅಪರಾಧಿಗಳನ್ನು ಬಂಧಿಸಿದ್ದಾರೆ. ಅವರ ಬಳಿ ಇದ್ದ 3.70 ಲಕ್ಷ ರೂಪಾಯಿ ಹಣ, ಮೊಬೈಲ್ ಫೋನ್‌ಗಳು, ಚೆಕ್‌ಬುಕ್‌ಗಳು ಮತ್ತು ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.