Bengaluru Man Idea Viral :ಬೆಂಗಳೂರಿನಲ್ಲಿ ಪ್ರತಿದಿನವೂ ಸಂಚಾರ ದಟ್ಟಣೆ ಹೆಚ್ಚಾಗಿರುವುದು ಗೊತ್ತಿರುವ ಸಂಗತಿ. ಇದರಿಂದಾಗಿ ಅಲ್ಲಿನ ಜನರಿಗೆ ಇದೊಂದು ದೊಡ್ಡ ತಲೆನೋವಾಗಿದೆ. ಯಾರಾದ್ರೂ ಎಲ್ಲಿಗಾದ್ರೂ ಪ್ರಯಾಣಿಸಬೇಕೆಂದ್ರೆ ಕ್ಯಾಬ್ ಸರ್ವೀಸ್ಗೆ ಮಾರು ಹೋಗುತ್ತಾರೆ. ವಿಶೇಷವಾಗಿ ಬೆಳಗಿನ ಸಮಯದಲ್ಲಿ ತುಂಬಾ ಕಷ್ಟಪಡುತ್ತಾರೆ. ಓಲಾ, ಉಬರ್ ಮತ್ತು ರ್ಯಾಪಿಡೊದಂತಹ ಅಪ್ಲಿಕೇಶನ್‌ಗಳಲ್ಲಿ ಗಂಟೆಗಳ ಕಾಲ ಕಾದರೂ ಸಹ ರೈಡ್ ಬುಕ್ ಆಗುವುದಿಲ್ಲ. ಬೆಂಗಳೂರಿನಲ್ಲಿ ವಾಸಿಸುವ ಒಬ್ಬ ಪ್ರಯಾಣಿಕನ ವಿಷಯದಲ್ಲೂ ಇದೇ ರೀತಿಯ ಘಟನೆ ಸಂಭವಿಸಿತ್ತು.
ಬೆಂಗಳೂರಿನ ಪಥಿಕ್ ಎಂಬ ವ್ಯಕ್ತಿ ಓಲಾ ಮತ್ತು ಉಬರ್‌ನಿಂದ ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದ್ದಾನೆ. ಆದರೆ ಆತನ ಸಮಯಕ್ಕೆ ಯಾವುದೇ ಕ್ಯಾಬ್ ಲಭ್ಯವಿರಲಿಲ್ಲ. ನಂತರ ಆತ ಒಂದು ಹೊಸ ಐಡಿಯಾ ಮಾಡಿದ್ದಾರೆ. ಅದೇನೆಂದ್ರೆ.. ಪೋರ್ಟರ್ ಆ್ಯಪ್ ಬಳಸಿ ಅವರು ತನಗೆ ತಾವೇ ಸ್ವತಃ ಕಚೇರಿಗೆ 'ಡೆಲಿವರಿ' ಮಾಡಿಕೊಳ್ಳುವಂತೆ ಬುಕ್ ಮಾಡಿದ್ದಾರೆ.
ಪೋರ್ಟರ್ ಅಪ್ಲಿಕೇಶನ್ ಸಾಮಾನ್ಯವಾಗಿ ಸರಕುಗಳ ವಿತರಣೆಗೆ ಹೆಸರುವಾಸಿಯಾಗಿದೆ. ಆದರೆ ಪ್ರಯಾಣಿಕನು ಅದನ್ನು ತನ್ನ ಪ್ರಯಾಣಕ್ಕಾಗಿ ಬಳಸುತ್ತಿದ್ದಾರೆ. ಅವರು ತಮ್ಮ ಈ ವಿಶಿಷ್ಟ ಪ್ರಯಾಣದ ಫೋಟೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ಅವರು ಪೋರ್ಟರ್ ಉದ್ಯೋಗಿಯ ಹಿಂದೆ ಕುಳಿತಿರುವುದು ಕಂಡುಬರುತ್ತದೆ. ಈ ದೃಶ್ಯ ಬೈಕ್ ಸವಾರನ ಹೆಲ್ಮೆಟ್‌ನ ಪ್ರತಿಬಿಂಬದಲ್ಲಿ ಸೆರೆಯಾಗಿದೆ. ‘ಇಂದು ನಾನು ಓಲಾ ಮತ್ತು ಉಬರ್ ಸಿಗದ ಕಾರಣ ಕಚೇರಿಗೆ ಹೋಗಲು ಪೋರ್ಟರ್ ಬಳಸಬೇಕಾಯಿತು’ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಪೋರ್ಟರ್ ಹೇಳಿದ್ದು ಹೀಗೆ : ಈ ಪೋಸ್ಟ್ ಅನ್ನು ಎಕ್ಸ್ನಲ್ಲಿ ಫೆಬ್ರವರಿ 6 ರಂದು ಶೇರ್ ಮಾಡಲಾಗಿದ್ದು, ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಇಲ್ಲಿಯವರೆಗೆ ಇದನ್ನು 78 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಸಾವಿರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಪಡೆದಿದೆ.
ಪೋರ್ಟರ್ ಕಂಪನಿಯೂ ಇದಕ್ಕೆ ಪ್ರತಿಕ್ರಿಯಿಸಿ, ಪಾಥಿಕ್ ಅವರ ಸಮಸ್ಯೆ ಪರಿಹರಿಸುವ ಚಿಂತನೆಯನ್ನು ಶ್ಲಾಘಿಸಿತು. ‘ಓಲಾ ಮತ್ತು ಉಬರ್ ಸಿಗದಿದ್ದಾಗ, ನಿಮ್ಮೊಳಗಿನ ಸೂಪರ್ ಹೀರೋವನ್ನು ಹೊರಹಾಕಿ ನಿಮ್ಮನ್ನು ಪೋರ್ಟರ್ ಆಗಿ ಪರಿವರ್ತಿಸಿಕೊಂಡಿದ್ದೀರಿ. ನಮ್ಮ ಬೆಂಗಳೂರು, ನಿಮ್ಮ ಸೃಜನಶೀಲತೆ ಮತ್ತು ಸಮಸ್ಯೆ ಪರಿಹರಿಸುವ ಮನಸ್ಥಿತಿಗೆ ನಾವು ವಂದಿಸುತ್ತೇವೆ’ ಎಂದು ಕಂಪನಿಯು ಎಕ್ಸ್ನಲ್ಲಿ ಬರೆದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯೋ ಚರ್ಚೆ :ಈ ಪೋಸ್ಟ್‌ಗೆ ಜನರು ಕಾಮಿಡಿಯಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದನ್ನು 'ಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರ' ಎಂದು ಕರೆದರೆ, ಇನ್ನು ಕೆಲವರು ಅದನ್ನು ಸ್ವತಃ ಪ್ರಯತ್ನಿಸುವ ಬಗ್ಗೆಯೂ ಮಾತನಾಡಿದರು. ಒಬ್ಬ ಬಳಕೆದಾರರು,‘ಬೆಂಗಳೂರಿನ ಸಂಚಾರ ಸಮಸ್ಯೆಗೆ ಇದು ಅತ್ಯುತ್ತಮ ಪರಿಹಾರ’ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, ‘ಪೋರ್ಟರ್‌ಗಳು ಈಗ ಪ್ರಯಾಣಿಕರ ಸೇವೆಯನ್ನು ಸಹ ಪ್ರಾರಂಭಿಸಬೇಕು’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಸಂಚಾರ ಸಮಸ್ಯೆ : ಬೆಂಗಳೂರಿನಲ್ಲಿ ಓಲಾ ಮತ್ತು ಉಬರ್‌ನಂತಹ ಕ್ಯಾಬ್ ಸೇವೆಗಳ ದೀರ್ಘ ಕಾಯುವಿಕೆ ಮತ್ತು ಹೆಚ್ಚಿನ ದರಗಳಿಂದ ಜನರು ತೊಂದರೆಗೊಳಗಾಗಿದ್ದಾರೆ. ಆದರೆ ನಗರದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ ಸಿಗುತ್ತದೆ ಎಂಬುದು ಒಂದು ದೊಡ್ಡ ಪ್ರಶ್ನೆಯಾಗಿದೆ. ಪಥಿಕ್ ಅವರ ಈ ಐಡಿಯಾ ಸಾಮಾಜಿಕ ಜಾಲತಾಣದಲ್ಲಿ ಜನರ ಮನವನ್ನು ಗೆಲ್ಲುತ್ತಿದೆ. ಸಮಸ್ಯೆ ಎದುರಾದಾಗಲೆಲ್ಲಾ ಬೆಂಗಳೂರಿನ ಜನರು ಅದನ್ನು ಪರಿಹರಿಸಲು ವಿಶಿಷ್ಟ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಈಗ ಭವಿಷ್ಯದಲ್ಲಿ ಇಂತಹ ವಿಶಿಷ್ಟ ಸಮಸ್ಯೆಗಳು ಎಷ್ಟು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.
ಓದಿ:ಸ್ಪ್ಯಾಡೆಕ್ಸ್ ಮಿಷನ್ನಲ್ಲಿ ಯಾವುದೇ ಸಮಸ್ಯೆಯಿಲ್ಲ; ಇಸ್ರೋ ಮುಖ್ಯಸ್ಥ ವಿ. ನಾರಾಯಣನ್