ಬೆಂಗಳೂರು:ಸಂಸ್ಕರಿಸಿದ ನೀರು ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಕೈಗೊಂಡಿರುವಂತಹ ಕ್ರಮಗಳಿಗೆ ಐಟಿ ಕಂಪನಿಗಳಿಂದ ಸಕಾರಾತ್ಮಕವಾದ ಪ್ರತಿಕ್ರಿಯೆ ದೊರೆಯುತ್ತಿದೆ. ಐಐಎಸ್‌ಸಿ ವಿಜ್ಞಾನಿಗಳ ಸಹಯೋಗದಲ್ಲಿ ಅಳವಡಿಸಿಕೊಳ್ಳಲಾಗಿರುವ ದೇಶೀಯ ತಂತ್ರಜ್ಞಾನದ ಮೂಲಕ ಜಲಮಂಡಳಿ ಉತ್ಪಾದಿಸುತ್ತಿರುವ ಝೀರೋ ಬ್ಯಾಕ್ಟೀರಿಯ ಸಂಸ್ಕರಿಸಿದ ನೀರನ್ನು ವಿಪ್ರೋ ಕಂಪನಿಗೆ ಗುರುವಾರದಿಂದ ಸರಬರಾಜು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ವಿಪ್ರೋ ಎಸ್‌ಇಝಡ್ ಕೊಡತಿಯಲ್ಲಿ ಸಂಸ್ಕರಿಸಿದ ನೀರು ಸರಬರಾಜು ಕಾರ್ಯದ ಮೇಲುಸ್ತುವಾರಿ ವಹಿಸಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ''ಬೆಂಗಳೂರು ನಗರದ ಭವಿಷ್ಯದ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಸಂಸ್ಕರಿಸಿದ ನೀರಿನ ಪಾತ್ರ ಬಹಳ ಮುಖ್ಯವಾಗಿದೆ. ಜಲಮಂಡಳಿಯ ವತಿಯಿಂದ ನಗರದಲ್ಲಿ 34ಕ್ಕೂ ಹೆಚ್ಚು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಲಾಗಿದೆ. ಇವುಗಳ ಮೂಲಕ ಪ್ರತಿ ದಿನ 1,200 ಎಂ.ಎಲ್.ಡಿಯಷ್ಟು ಉತ್ತಮ ಗುಣಮಟ್ಟದ ಸಂಸ್ಕರಿಸಿದ ನೀರು ಲಭ್ಯವಾಗುತ್ತಿದೆ. ಇದರ ಬಳಕೆಯನ್ನು ಹೆಚ್ಚಿಸುವ ಮೂಲಕ ಕಾವೇರಿ ನೀರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕಳೆದ 2 ತಿಂಗಳಲ್ಲಿ ಕೈಗೊಂಡ ಕಾರ್ಯಗಳಿಗೆ ಐಟಿ ಕಂಪನಿಗಳು ಹಾಗೂ ಬಲ್ಕ್ ಯೂಸರ್ಸ್ ಸಾಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಸ್ಕರಿಸಿದ ನೀರಿನ ಬೇಡಿಕೆ 60 ಸಾವಿರ ಲೀಟರ್‌ಗಳಿಂದ 6 ಎಂ.ಎಲ್.ಡಿಗೆ ತಲುಪಿದೆ. ಇದನ್ನು ಇನ್ನಷ್ಟು ಹೆಚ್ಚು ಮಾಡುವ ಗುರಿ ನಮ್ಮದಾಗಿದೆ'' ಎಂದು ಹೇಳಿದರು.
ಈ ನೀರಿಗೆ ಐಟಿ ಕಂಪನಿಗಳಿಂದ ಬೇಡಿಕೆ: ''ಭಾರತದ ಪ್ರಮುಖ ವಿಜ್ಞಾನ ಸಂಶೋಧನಾ ಸಂಸ್ಥೆಯಾಗಿರುವ ಐಐಎಸ್‌ಸಿ ವಿಜ್ಞಾನಿಗಳ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಬೆಂಗಳೂರು ಜಲಮಂಡಳಿಯ ಎಂಜಿನಿಯರ್‌ಗಳು ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ದೇಶೀಯ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಎರಡು ವಾರಗಳ ಹಿಂದೆ ಪ್ರಾರಂಭಿಸಲಾದ ಈ ಯೋಜನೆಯ ಮೂಲಕ ಇಂದು ಪ್ರತಿ ದಿನ ಸುಮಾರು 1 ಕೋಟಿ ಲೀಟರ್ನಷ್ಟು ಝೀರೋ ಬ್ಯಾಕ್ಟೀರಿಯಲ್ ಸಂಸ್ಕರಿಸಿದ ನೀರು ಉತ್ಪಾದನೆಯ ಸಾಮರ್ಥ್ಯವನ್ನು ಜಲಮಂಡಳಿ ಅಳವಡಿಸಿಕೊಂಡಿದೆ. ಇದೀಗ ನಗರದ ಅಗರ, ಕೆ.ಸಿ ವ್ಯಾಲಿ ಮತ್ತು ಬೆಳ್ಳಂದೂರು ಎಸ್.ಟಿ.ಪಿಗಳಲ್ಲಿ ಈ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಈ ನೀರಿಗೆ ಐಟಿ ಕಂಪನಿಗಳಿಂದ ಬೇಡಿಕೆ ಬಂದಿದೆ'' ಎಂದು ತಿಳಿಸಿದರು.