ಯಲಹಂಕ :ಅಪಾರ್ಟ್ಮೆಂಟ್ಗೆ ಸ್ನೇಹಿತನನ್ನು ಡ್ರಾಪ್ ಮಾಡಲು ಬಂದ ಯುವಕನ ಮೇಲೆ ಸೆಕ್ಯೂರಿಟಿ ಗಾರ್ಡ್ಗಳು ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಯಲಹಂಕ ತಾಲೂಕಿನ ಮಾರಸಂದ್ರ ಬಳಿ ನಡೆದಿದೆ. ಘಟನೆಯ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಇದೇ ವೇಳೆ, ಹೊಡೆಯುವ ಅಧಿಕಾರವನ್ನು ನಿಮಗೆ ಕೊಟ್ಟಿದ್ದು ಯಾರು? ಎಂದು ಸಾರ್ವಜನಿಕರು ಸೆಕ್ಯೂರಿಟಿ ಗಾರ್ಡ್ಗಳಿಗೆ ಪ್ರಶ್ನೆ ಮಾಡಿದ್ದಾರೆ. ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದೆ.
ಮಾರಸಂದ್ರ ಬಳಿ ಇರುವ ಪ್ರಾವಿಡೆಂಟ್ ವೆಲ್ವರ್ಥ್ ಸಿಟಿ ಅಪಾರ್ಟ್ಮೆಂಟ್ನಲ್ಲಿ ಫೆಬ್ರವರಿ 18ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರ್ಚನ್ (19) ಎಂಬ ಯುವಕನಿಗೆ ಸೆಕ್ಯೂರಿಟಿ ಗಾರ್ಡ್ಗಳು ದೊಣ್ಣೆಯಿಂದ ಥಳಿಸಿದ್ದಾರೆ. ಅರ್ಚನ್ ದೊಡ್ಡಬಳ್ಳಾಪುರ ನಗರ ಹೊರವಲಯದ ಪಾಲನಜೋಗಿಹಳ್ಳಿ ನಿವಾಸಿಯಾಗಿದ್ದು, ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಂದು ಸ್ನೇಹಿತ ರಫಿಯನ್ನು ಡ್ರಾಪ್ ಮಾಡಲು ಅಪಾರ್ಟ್ಮೆಂಟ್ ಬಳಿ ಹೋಗಿದ್ದ.
ಈ ವೇಳೆ ಅರ್ಚನ್ ಮತ್ತು ಅಪಾರ್ಟ್ಮೆಂಟ್ನಲ್ಲಿರುವ ನಿತೀಶ್ ಹಾಗೂ ಆತನ ಸ್ನೇಹಿತರ ಜೊತೆ ಜಗಳವಾಗಿದೆ. ತಕ್ಷಣವೇ ಅರ್ಚನ್ ಬೈಕ್ ತೆಗೆದುಕೊಂಡು ಅಲ್ಲಿಂದ ಹೊರಗೆ ಬರಲು ಪ್ರಯತ್ನಿಸಿದ್ದಾನೆ. ಈ ವೇಳೆ, ಸೆಕ್ಯೂರಿಟಿ ಆಫೀಸರ್ ಮಂಜುನಾಥ್ ಮತ್ತು 10 ಮಂದಿ ಸೆಕ್ಯೂರಿಟಿ ಗಾರ್ಡ್ಗಳು ಯುವಕನ ಮೇಲೆ ಮನಸ್ಸೋ ಇಚ್ಚೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.