ಬೆಂಗಳೂರು: ಎಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಹೊಟೇಲ್ವೊಂದರಲ್ಲಿ ಜ.12ರಂದು ಯುವತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ದೈಹಿಕ ಸಂಪರ್ಕಕ್ಕಾಗಿ ಸೋದರಮಾವನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಆತ್ಮಹತ್ಯೆಗೆ ಶರಣಾಗಿದ್ದ ಸುಹಾಸಿ ಸಿಂಗ್ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಮೃತಳ ಸೋದರ ಮಾವ ಪ್ರವೀಣ್ ಸಿಂಗ್ ತಪ್ಪಿತಸ್ಥ ಎಂದು ಕಂಡು ಬಂದಿದೆ. ಈ ಸಂಬಂಧ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ಗುಣಾರೆ ಅವರಿಂದ ಮಾಹಿತಿ (ETV Bharat) ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಹಾಸಿ ಸಿಂಗ್ನ ಪೋಷಕರು ಆರು ವರ್ಷಗಳಿಂದ ತಿರುಮಲಶೆಟ್ಟಿಯಲ್ಲಿ ವಾಸವಾಗಿದ್ದರು. ಮೃತಳ ಸೋದರ ಮಾವ ಪ್ರವೀಣ್ ಸಿಂಗ್ ಕುಟುಂಬ ಕೆ.ಆರ್.ಪುರನ ಆಲ್ಫಾಗಾರ್ಡನ್ನ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದರು. ಪೋಷಕರ ಮನೆಯಲ್ಲಿ ಹೆಚ್ಚು ವಾಸವಿರದೇ ಆರೋಪಿ ಮನೆಯಲ್ಲಿ ಸುಹಾಸಿ ಸಿಂಗ್ ಕಾಲ ಕಳೆಯುತ್ತಿದ್ದಳು. ರಜೆ ದಿನಗಳಲ್ಲಿ ಆರೋಪಿ ಕುಟುಂಬ ಜೊತೆಗೆ ಮೃತ ಯುವತಿಯು ಪ್ರವಾಸಕ್ಕೆ ಹೋಗುತ್ತಿದ್ದರು. ಈ ವೇಳೆ, ಪತ್ನಿಗೆ ತಿಳಿಯದಂತೆ ನಾದಿನಿ ಸುಹಾಸಿ ಸಿಂಗ್ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದ. ಇಬ್ಬರ ನಡುವೆ ದೈಹಿಕ ಸಂಪರ್ಕವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಮೃತ ಯುವತಿ ಆರೋಪಿಯಿಂದ ಅಂತರ ಕಾಯ್ದುಕೊಂಡಿದ್ದಳು. ಇದರಿಂದ ಪ್ರವೀಣ್ ಅಸಮಾಧಾನಗೊಂಡಿದ್ದ. ಕರೆ ಮಾಡಿ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಪೀಡಿಸುತ್ತಿದ್ದ. ಬರದಿದ್ದರೆ ನಗ್ನ ಫೋಟೋ ಹಾಗೂ ವಿಡಿಯೋ ಪೋಷಕರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದ. ಜ.12ರಂದು ಐಟಿಪಿಎಲ್ ಮುಖ್ಯರಸ್ತೆಯಲ್ಲಿರುವ ಖಾಸಗಿ ಹೊಟೇಲ್ ಬುಕ್ ಮಾಡಿ ನಾದಿನಿಯನ್ನು ಆಹ್ವಾನಿಸಿದ್ದ.
ಆರೋಪಿ ಕಾಟ ತಾಳಲಾರದೇ ಸಾಯುವ ನಿರ್ಧಾರಕ್ಕೆ ಬಂದಿದ್ದ ಸುಹಾಸಿ ಸಿಂಗ್ ಮಾರ್ಗ ಮಧ್ಯೆ ಬಾಟೆಲ್ನಲ್ಲಿ ಪೆಟ್ರೋಲ್ ಖರೀದಿಸಿದ್ದಳು. ರೂಮ್ಗೆ ಬಂದೊಡನೆ ಲೈಂಗಿಕತೆ ಸಹಕರಿಸುವಂತೆ ಆರೋಪಿ ಒತ್ತಡ ಹಾಕಿದ್ದ. ತನ್ನನ್ನು ಬಿಟ್ಟುಬಿಡು ಎಂದು ಗೋಗರೆದರೂ ಹಠ ಮುಂದುವರೆಸಿದ ಆರೋಪಿ ತನ್ನೊಂದಿಗೆ ಸಹಕರಿಸದಿದ್ದರೆ ಪೆಂಡ್ರೈವ್ನಲ್ಲಿರುವ ಲೈಂಗಿಕ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ನೊಂದ ಯುವತಿ ಕ್ಷಣಾರ್ಧದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಳು.
ಆತಂಕಗೊಂಡ ಆರೋಪಿ ಕೂಡಲೇ ಬಚ್ಚಲು ಮನೆಯಿಂದ ನೀರು ಹಾಕಿ ನಂದಿಸುವಷ್ಟರಲ್ಲಿ ಆಕೆಯ ಮುಖ ಹಾಗೂ ಇನ್ನಿತರ ಭಾಗಗಳಿಗೆ ಸುಟ್ಟ ಗಾಯಗಳಾಗಿವೆ. ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಮೃತ ಯುವತಿ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿರುವುದಾಗಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ಗುಣಾರೆ ತಿಳಿಸಿದ್ದಾರೆ.
ಇದನ್ನೂ ಓದಿ:ಬಾಲಗೃಹದಲ್ಲಿ 17 ವರ್ಷದ ಬಾಲಕನಿಂದ 15 ವರ್ಷದ ಬಾಲಕನ ಕೊಲೆ