ಮಂಗಳೂರು: ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ. ಅರ್ಷದ್ (21) ಬಂಧಿತ ಆರೋಪಿ.
ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಮೂಡಬಿದಿರೆಯ ಪ್ರಾಂತ್ಯ ಗ್ರಾಮದ ಟೈಲರ್ ಅಂಗಡಿಯೊಂದಕ್ಕೆ ಯುವತಿ ಹೋಗುತ್ತಿರುವಾಗ ಘಟನೆ ನಡೆದಿದೆ. ಕ್ಲಾಸ್ಮೇಟ್ ಆಗಿದ್ದ ಆರೋಪಿ ಅರ್ಷದ್, ಯುವತಿಯನ್ನು ಅಡ್ಡಗಟ್ಟಿ 'ನೀನು ನನ್ನನ್ನು ಯಾಕೆ ಪ್ರೀತಿಸುತ್ತಿಲ್ಲ' ಎಂದನಲ್ಲದೇ, ತನ್ನ ಮೈ ಮೇಲೆ ಕೈ ಹಾಕಲು ಬಂದ ಎಂದು ಯುವತಿ ದೂರಿದ್ದಾಳೆ. 19 ವರ್ಷದ ಯುವತಿ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ನಡೆದಾಗ ತಾನು ಬೊಬ್ಬೆ ಹೊಡೆದ ಕೂಡಲೇ ಟೈಲರ್ ಹೊರಬಂದಾಗ ಆರೋಪಿ ಸ್ಥಳದಿಂದ ಓಡಿಹೋಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯುವತಿ ಅಡ್ಡಗಟ್ಟಿ ಕಿರುಕುಳ ನೀಡಿದ ಪ್ರಕರಣದ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲತಃ ಇರುವೈಲಿನವನಾದ ಅರ್ಷದ್, ಈ ಹಿಂದೆ ಮೂಡುಬಿದಿರೆ ಕೊಡಂಗಲ್ಲು ಪಿಲಿಪಂಜರ ಎಂಬಲ್ಲಿ ವಾಸವಿದ್ದ. ಬಳಿಕ ಕೋಟೆಬಾಗಿಲಿನಲ್ಲಿ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದ ತಿಳಿದು ಬಂದಿದೆ. ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಕೆಲ ಸಮಯದ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ಇದ್ದಳು. ಗುರುವಾರ ಬಟ್ಟೆ ಹೊಲಿಸಲೆಂದು ಟೈಲರ್ ಅಂಗಡಿಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿ:ವಿವಾಹವಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ: ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ - Young Woman Rape Case