ದಾವಣಗೆರೆ :ವಧು ಸಿಗಲಿಲ್ಲ ಎಂದು ಖಿನ್ನತೆಗೊಳಗಾದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಬಾಸೂರು ಗ್ರಾಮದಲ್ಲಿ ನಡೆದಿದೆ. ಹೆಚ್. ಪವನ್ (30) ಆತ್ಮಹತ್ಯೆ ಮಾಡಿಕೊಂಡ ಯುವ ಕೃಷಿಕ ಎಂದು ಹೊನ್ನಾಳಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತ ಯುವಕ ಪವನ್ ವಧು ಸಿಗಲಿಲ್ಲವೆಂಬ ಕೊರಗಿನಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಿರೇಬಾಸೂರು ಗ್ರಾಮದ ಹೆಚ್. ಪವನ್ ವೃತ್ತಿಯಲ್ಲಿ ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಪವನ್ಗೆ ಮನೆಯಲ್ಲಿ ಕುಟುಂಬಸ್ಥರು ಮದುವೆ ಮಾಡಲು ಚಿಂತನೆ ನಡೆಸಿದ್ದರು.
ಬಳಿಕ ಎರಡು ವರ್ಷಗಳಿಂದ ಮದುವೆ ಮಾಡಲು ಹುಡುಗಿಯನ್ನು ಹುಡುಕುತ್ತಿದ್ದರು. ಮೃತ ಪವನ್ ಹನುಮಂತಪ್ಪ ಅವರ ಪುತ್ರ. ಹನುಮಂತಪ್ಪ ಅವರಿಗೆ ಇಬ್ಬರು ಮಕ್ಕಳಿದ್ದು, ಪವನ್ ಹಿರಿಯ ಪುತ್ರನಾಗಿ ಮನೆಗೆ ಆಧಾರಸ್ತಂಭ ಆಗಿದ್ದನು. ಇಬ್ಬರು ಪುತ್ರರಿಗೆ ಮದುವೆ ಮಾಡಲು ತಂದೆ ಹನುಮಂತಪ್ಪ ವಧುಗಳನ್ನು ಹುಡುಕುತ್ತಿದ್ದರು. ವಧು ಸಿಗದೇ ಇರುವ ಕಾರಣಕ್ಕೆ ಇತ್ತೀಚೆಗೆ ಪವನ್ ಮಾನಸಿಕ ಖಿನ್ನತೆಗೆ ಒಳಗಾಗಿ ವಿಷ ಸೇವಿಸಿ ಕೊನೆಯುಸಿರೆಳೆದಿದ್ದಾರೆ ಎಂದು ಹೊನ್ನಾಳಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಕುಟುಂಬದ ಸದಸ್ಯರು ಕೃಷಿ ಕೆಲಸಕ್ಕೆ ತೆರಳಿದ್ದಾಗ ಯುವಕ ಪವನ್ ದುಡುಕಿನ ವಿಷ ಸೇವಿಸಿದ್ದ. ಬಳಿಕ ಅಸ್ವಸ್ಥಗೊಂಡಿದ್ದ ಆತನನ್ನು ಕಂಡು ಕುಟುಂಬಸ್ಥರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದೆ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :ಕೌಟುಂಬಿಕ ಕಲಹ: ಪತ್ನಿಗೆ ಗುಂಡಿಕ್ಕಿ ಕೊಂದು ಪತಿ ಆತ್ಮಹತ್ಯೆ! - Husband Killed His Wife