ಬೆಂಗಳೂರು: ಬೆಳಗಾವಿಯಲ್ಲಿ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಮತ್ತು ಅಸಂವಿಧಾನಿಕ ಪದ ಬಳಕೆ ಮಾಡಿ ಅಪಮಾನಿಸಿರುವ ಸಿ.ಟಿ.ರವಿ ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೋರಿ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಪತ್ರ ಬರೆದಿದ್ದಾರೆ.
ಡಿ.19ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪರಿಷತ್ತಿನ ಸದಸ್ಯ ಸಿ.ಟಿ.ರವಿ ಅವರು ಅಸಭ್ಯ ಮತ್ತು ಅಸಂವಿಧಾನಿಕ ಪದ ಬಳಕೆ ಮಾಡಿ ಅಪಮಾನಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿ, ಗೌರವ ಹೊಂದಿರಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯೇ ಸದನದಲ್ಲಿ ಮಹಿಳಾ ಮಂತ್ರಿಯೊಬ್ಬರ ವಿರುದ್ಧ ಅತೀ ಕೀಳುಮಟ್ಟದ ಅಸಾಂವಿಧಾನಿಕ ಪದ ಪ್ರಯೋಗ ಮಾಡಿದ್ದಾರೆ. ಇದು ನಾಡಿನ ಹೆಣ್ಣು ಕುಲಕ್ಕೇ, ಅವರ ಭಾವನೆಗಳಿಗೆ ಮಾಡಿರುವ ಅಪಮಾನವಾಗಿದೆ. ಆದ್ದರಿಂದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ನಾಗಲಕ್ಷ್ಮಿ ಚೌಧರಿ ಕೋರಿದ್ದಾರೆ.
ಇದನ್ನೂ ಓದಿ: ತಕ್ಷಣವೇ ಸಿ.ಟಿ.ರವಿ ಬಿಡುಗಡೆಗೆ ಆದೇಶಿಸಿ 'ಜನಪ್ರತಿನಿಧಿಗಳಾಗಿ ಆರೋಪಿ, ದೂರುದಾರರ ವರ್ತನೆ ದುರದೃಷ್ಟಕರ' ಎಂದ ಹೈಕೋರ್ಟ್