ಬೆಂಗಳೂರು: ಮುಂಗಾರು ಮಳೆ ತನ್ನ ಆರ್ಭಟ ಮುಂದುವರಿಸಿದೆ. ಇದರಿಂದ ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿ, ಸಾವು ನೋವು ಸಂಭವಿಸಿವೆ. ಹಲವು ಜಿಲ್ಲೆಗಳಲ್ಲಿ ಮಳೆ ಮತ್ತಷ್ಟು ಬಿರುಸುಗೊಂಡಿದೆ. ಈ ಹಿನ್ನೆಲೆ ಭಾನುವಾರಕ್ಕೆ ಅನ್ವಯವಾಗುವಂತೆ ಹವಾಮಾನ ಇಲಾಖೆ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇದರ ಜೊತೆಗೆ ಮುಂದಿನ ವಾರದಲ್ಲಿ ಮಳೆ ಕಡಿಮೆ ಆಗಲಿದೆ ಎಂಬ ಸುಳಿವನ್ನು ಸಹ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಯಾದಗಿರಿ, ವಿಜಯಪುರ, ಕೊಪ್ಪಳ, ಕಲಬುರಗಿ, ಬೆಳಗಾವಿ, ಬೀದರ್, ಧಾರವಾಡ, ಗದಗ, ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗಿನಲ್ಲಿ ಭಾನುವಾರ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.
ಯಾದಗಿರಿ, ಶಿವಮೊಗ್ಗದ ಆಗುಂಬೆ, ಹಾವೇರಿ, ಕಲಬುರಗಿಯ ಅಳಂದ, ಬೆಂಗಳೂರು ಗ್ರಾಮಾಂತರ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಶನಿವಾರ ವರ್ಷಧಾರೆಯಾಗಿದೆ. ಉತ್ತರ ಕರ್ನಾಟಕದ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಆಗಸ್ಟ್ 18 ರಿಂದ 21ರ ವರೆಗೆ ಗುಡುಗು ಸಹಿತ ಭಾರಿ ಮಳೆ ಬೀಳುವ ಸಂಭವವಿದೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲೂ ಮುಂದಿನ ಮೂರು ದಿನ ಮಳೆ ಸುರಿಯಲಿದೆ. ಆಗಸ್ಟ್ 22ರಿಂದ ರಾಜ್ಯದಲ್ಲಿ ಮಳೆ ಇಳಿಮುಖವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.