ಮೈಸೂರು: "ಸಿಬಿಐ, ಕೋರ್ಟ್ಗೆ ನೀಡಿರುವ ವರದಿಯ ಆಧರಿಸಿ ಯತೀಂದ್ರ ಹೇಳಿಕೆ ನೀಡಿದ್ದಾನೆಯೇ ಹೊರತು ಅಮಿತ್ ಶಾ ಅವರನ್ನು ಅವಮಾನ ಮಾಡಲು ಹೇಳಿಕೆ ನೀಡಿಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮಗ ಡಾ. ಯತೀಂದ್ರ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಇಂದು ಮೂರು ದಿನಗಳ ಮೈಸೂರು, ಚಾಮರಾಜನಗರ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತಾನಾಡಿದರು. ಸಿಬಿಐ ಕೋರ್ಟ್ಗೆ ನೀಡಿರುವ ವರದಿಯಲ್ಲಿ ಈ ಅಂಶ ಇದೆ. ಅದನ್ನು ಉಲ್ಲೇಖಿಸಿ ಯತೀಂದ್ರ ಹೇಳಿಕೆ ನೀಡಿದ್ದಾನೆಯೇ ಹೊರತು ಅಮಿತ್ ಶಾ ಅವರನ್ನು ಅವಮಾನಿಸುವ ಉದ್ದೇಶದಿಂದ ಹೇಳಿಕೆ ನೀಡಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಗೆಲ್ಲುವುದು 200 ಸ್ಥಾನಗಳನ್ನು ಮಾತ್ರ: "ದೇಶದಲ್ಲಿ ಅಭಿವೃದ್ಧಿಯೇ ಆಗಿಲ್ಲ. ಅವರು ಗೆಲ್ಲುವುದು 200 ಸ್ಥಾನಗಳನ್ನು ಮಾತ್ರ ಆದರೆ 400 ಸ್ಥಾನ ಗೆಲ್ಲುತ್ತೇವೆ ಎಂದು ಚುನಾವಣಾ ಸ್ಟ್ರಾಟರ್ಜಿ ಮಾಡುತ್ತಿದ್ದಾರೆ. ಅವರು ಸರ್ವೇ ಮಾಡಿದ್ದಾರೆ ಅದರಲ್ಲಿ 200ಕ್ಕಿಂತ ಕಡಿಮೆ ಬಂದಿದೆ. ಹಾಗಾಗಿ 400 ಸೀಟ್ನ ಸ್ಟ್ರ್ಯಾಟಜಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬುದು ಸಹ ಚುನಾವಣಾ ಸ್ಟ್ರಾಟರ್ಜಿ. ಇವತ್ತು ನಾವು ಯಾರನ್ನು ಕೂಡ ಮರುಳು ಮಾಡಲು ಸಾಧ್ಯವಿಲ್ಲ, ಜನರನ್ನು ದಡ್ಡರನ್ನಾಗಿ ಮಾಡಲು ಸಹ ಸಾಧ್ಯವಿಲ್ಲ. ಎಲ್ಲರೂ ಬುದ್ಧಿವಂತರಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ 20 ಸ್ಥಾನಗಳನ್ನು ಗೆಲ್ಲುತ್ತದೆ" ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.