ಬೆಂಗಳೂರು: ರಾಜ್ಯದಲ್ಲಿ ಸಹಕಾರ ಸಂಘಗಳ ಸದಸ್ಯರಾಗಿರುವ ರೈತರಿಗೆ 'ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ'ಯನ್ನು ನೀಡಲಾಗುತ್ತಿದೆ. ಈ ಯೋಜನೆಯನ್ನು 2024-25ನೇ ಸಾಲಿಗೂ ಮುಂದುವರೆಸಲು ಅನುವಾಗುವಂತೆ ಸದಸ್ಯರ ನೋಂದಣಿ ಪ್ರಾರಂಭಿಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಈ ಯೋಜನೆಯು ನಿಗದಿಪಡಿಸಿರುವ ಚಿಕಿತ್ಸೆಗಳ ಪ್ಯಾಕೇಜ್ ದರದ ಮಿತಿಗೊಳಪಟ್ಟಿದೆ. ಫಲಾನುಭವಿ ಮತ್ತು ಅವರ ಕುಟುಂಬಕ್ಕೆ ವಾರ್ಷಿಕ ಗರಿಷ್ಠ 5 ಲಕ್ಷ ರೂ ವೈದ್ಯಕೀಯ ಚಿಕಿತ್ಸಾ ವೆಚ್ಚದ ಮಿತಿಯೊಂದಿಗೆ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ.
ಏನಿದು ಯೋಜನೆ?: ಯಶಸ್ಸಿನಿ ವಿಮಾ ಯೋಜನೆಯಲ್ಲ. ಇದೊಂದು ಸ್ವಯಂ ನಿಧಿ ಸಹಕಾರ ಸಂಘಗಳ ಯೋಜನೆ. ಸಹಕಾರ ಸಂಘಗಳ ಸದಸ್ಯರು ನಿಗದಿತ ವಾರ್ಷಿಕ ವಂತಿಗೆ ಪಾವತಿಸಿ ಯೋಜನೆ ಪಡೆದುಕೊಳ್ಳುತ್ತಾರೆ. ರಾಜ್ಯ ಸರ್ಕಾರ ಬಜೆಟ್ನಲ್ಲಿ ಇದಕ್ಕಾಗಿ ಅನುದಾನ ಒದಗಿಸಿದೆ. ಇದರ ಮಾನದಂಡಗಳು ಹೀಗಿವೆ.
- 75 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು.
- ಅರ್ಜಿದಾರರು ಅರ್ಜಿ ಪ್ರಕ್ರಿಯೆಗೆ ಕನಿಷ್ಠ 3 ತಿಂಗಳ ಮೊದಲು ಕರ್ನಾಟಕದ ಸಹಕಾರಿ ಸಂಘದ ಸದಸ್ಯರಾಗಿರಬೇಕು.
- ಸದಸ್ಯರ ಪತ್ನಿ, ಪೋಷಕರು ಮತ್ತು ಮಕ್ಕಳು ಸಹ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
- ಖಾಸಗಿ ಕಂಪನಿ ಅಥವಾ ಇತರ ಸಂಸ್ಥೆಗಳಲ್ಲಿ ತಿಂಗಳಿಗೆ 30 ಸಾವಿರ ರೂ.ಗಿಂತ ಹೆಚ್ಚು ವೇತನ ತೆಗೆದುಕೊಳ್ಳುವವರಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ನೋಂದಣಿ ಮಾಡಿಕೊಳ್ಳಲು ಅರ್ಹರಲ್ಲ. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯಡಿ ಹೊಸ ನೋಂದಣಿಗೆ ಸರ್ಕಾರ ಆದೇಶ ಹೊರಡಿಸಿದ್ದು, ಕೆಲವು ಷರತ್ತುಗಳನ್ನು ವಿಧಿಸಿದೆ.
- ಡಿಸೆಂಬರ್ 1ರಿಂದ ಆರಂಭವಾಗಿರುವ ನೋಂದಣಿ ಪ್ರಕ್ರಿಯೆ, ಡಿಸೆಂಬರ್ 31ರವರೆಗೆ ಮುಂದುವರೆಯಲಿದೆ.
- 2024-25ನೇ ಸಾಲಿನ ಚಿಕಿತ್ಸಾ ಅವಧಿಯನ್ನು 2025ರ ಏಪ್ರಿಲ್ 1ರಿಂದ 2026ರ ಮಾರ್ಚ್ 31ರವರೆಗೆ ನಿಗದಿಗೊಳಿಸಲಾಗಿದೆ.
- ನೋಂದಣಿಯಾದ ಸದಸ್ಯರಿಗೆ ಯೂನಿಕ್ ಐಡಿ ಸಂಖ್ಯೆಯುಳ್ಳ ಕಾರ್ಡ್‌ನ್ನು ಮುಂದಿನ ವರ್ಷದ ಮಾರ್ಚ್1ರಿಂದ ವಿತರಿಸಲಾಗುತ್ತದೆ.
- 2025ರ ಏಪ್ರಿಲ್ 1ರಿಂದ ಫಲಾನುಭವಿಗಳು ನಗದುರಹಿತ ಚಿಕಿತ್ಸೆ ಪಡೆಯಬಹುದು.
- ಗುರುತಿನ ಚೀಟಿಯನ್ನು ನೆಟ್‌ವರ್ಕ್ ಆಸ್ಪತ್ರೆಗಳಿಗೆ ಭೇಟಿ ನೀಡಿದ ವೇಳೆ ಕಡ್ಡಾಯವಾಗಿ ತೋರಿಸಬೇಕು.
ಯಾರು ಅರ್ಹರು?:
- ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸಹಕಾರ ಸಂಘ/ಬ್ಯಾಂಕ್ಗಳ (ಗ್ರಾಮೀಣ ಮತ್ತು ನಗರ ಸಹಕಾರ ಸಂಘಗಳು ಒಳಗೊಂಡಂತೆ) ಸದಸ್ಯರು ಅಥವಾ ಸಹಕಾರಿ ಸ್ವ-ಸಹಾಯ ಗುಂಪುಗಳ ಸದಸ್ಯರು, ಸದಸ್ಯರಾಗಿ ಒಂದು ತಿಂಗಳು ಪೂರ್ಣಗೊಂಡಿದ್ದಲ್ಲಿ ಅಂತಹ ಸದಸ್ಯರು ನಿಗದಿತ ವಾರ್ಷಿಕ ವಂತಿಗೆ ಪಾವತಿಸಿ ಯೋಜನೆಯಡಿ ಸದಸ್ಯರಾಗಲು ಅರ್ಹರು.
- ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿಯಾಗಿ ಕಾರ್ಯನಿರತ ಸಹಕಾರ ಸಂಘಗಳಲ್ಲಿ ಕನಿಷ್ಠ 3 ವರ್ಷ ಸೇವೆ ಪೂರ್ಣಗೊಳಿಸಿ ಮಾಸಿಕ 30 ಸಾವಿರ ರೂ.ಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ನೌಕರರು ಹಾಗೂ ಅವರ ಅರ್ಹ ಕುಟುಂಬ ಸದಸ್ಯರು ನೋಂದಣಿ ಮಾಡಿಕೊಳ್ಳಬಹುದು.
- ಅವಿಭಕ್ತ ಕುಟುಂಬಕ್ಕೆ ಅವಕಾಶ: ಒಬ್ಬ ಯಶಸ್ವಿನಿ ಸದಸ್ಯ ಒಂದು ಅವಿಭಕ್ತ ಕುಟುಂಬದ ಸದಸ್ಯರಾಗಿದ್ದು, ಎಲ್ಲಾ ಸದಸ್ಯರಿಗೆ ಒಂದೇ ರೇಷನ್ ಕಾರ್ಡ್ ಹೊಂದಿದ್ದರೆ, ವಾರ್ಷಿಕ ವಂತಿಗೆ ಪಾವತಿಸಿದ್ದಲ್ಲಿ ಯೋಜನೆಯ ಸೌಲಭ್ಯ ಪಡೆಯಲು ಅವಕಾಶವಿದೆ. ಅವಿಭಕ್ತ ಕುಟುಂಬದ ಸದಸ್ಯರಿಗೆ ಒಂದೇ ರೇಷನ್ ಕಾರ್ಡ್ ಇಲ್ಲದಿದ್ದರೆ ಈ ಯೋಜನೆಯಡಿ ನೋಂದಾಯಿಸಲು ಅವಕಾಶವಿರಲ್ಲ.
ಸರ್ಕಾರದ ಎಚ್ಚರಿಕೆ: ಸಮಾಪನೆ, ನಿಷ್ಕ್ರಿಯಗೊಂಡಿರುವ ಸಹಕಾರ ಸಂಘಗಳ ನೌಕರರ ಸಹಕಾರ ಸಂಘಗಳ ಸದಸ್ಯರು ಅಥವಾ ಪ್ರಧಾನ ಅರ್ಜಿದಾರರು ಮತ್ತು ಆತನ ಕುಟುಂಬದ ಯಾವುದೇ ಸದಸ್ಯ ಸರ್ಕಾರಿ ನೌಕರರಾಗಿದ್ದಲ್ಲಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಅರ್ಹತೆ ಇರುವುದಿಲ್ಲ. ಮಾಸಿಕ 30 ಸಾವಿರ ರೂ.ಗಿಂತ ಹೆಚ್ಚು ವೇತನ ಪಡೆಯುತ್ತಿದ್ದಲ್ಲಿ ಅಥವಾ ಒಬ್ಬ ವ್ಯಕ್ತಿ ಯಾವುದೇ ಆರೋಗ್ಯ ವಿಮಾ ಯೋಜನೆಯಡಿ ಸದಸ್ಯರಾಗಿದ್ದರೆ ಅಂಥವರಿಗೆ ಯೋಜನೆಯಡಿ ಸದಸ್ಯರಾಗಲು ಅರ್ಹತೆ ಇರುವುದಿಲ್ಲ. ಒಂದು ವೇಳೆ ಅನರ್ಹರು ನೋಂದಣಿ ಮಾಡಿಕೊಂಡರೆ ಪಾವತಿಸಿದ ವಂತಿಗೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.