ಬೆಂಗಳೂರು:ತಮ್ಮ ಅಪ್ರಾಪ್ತ ಪುತ್ರಿ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಮಹಿಳೆ ನಗರದ ಆಸ್ಪತ್ರೆಯೊಂದರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ 53 ವರ್ಷದ ಮಹಿಳೆ ಆರೋಗ್ಯದಲ್ಲಿ ನಿನ್ನೆ ಸಂಜೆ ಏರುಪೇರು ಕಂಡುಬಂದಿತ್ತು. ಕೂಡಲೇ ಮಕ್ಕಳು ಹಾಗೂ ಸಂಬಂಧಿಕರು, ಮಹಿಳೆಯನ್ನು ಮನೆ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿ 9.30 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮಹಿಳೆ ನೀಡಿದ್ದ ದೂರು ಆಧರಿಸಿ ಯಡಿಯೂರಪ್ಪ ವಿರುದ್ಧ ಮಾ.14ರಂದು ಸದಾಶಿವನಗರ ಠಾಣೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ನಂತರ ತಮಗೆ ಜೀವ ಬೆದರಿಕೆ ಇರುವುದಾಗಿ ದೂರುದಾರ ಮಹಿಳೆ ಆರೋಪಿಸಿದ್ದರು. ಹೀಗಾಗಿ, ಅವರ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ದಿನದ 24 ಗಂಟೆಯೂ ಮಹಿಳೆಯ ಮನೆ ಬಳಿ ಪಾಳಿ ಪ್ರಕಾರ ಇಬ್ಬರು ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿತ್ತು. ಈ ಮಧ್ಯೆ ಮಹಿಳೆ ಕಳೆದ ಒಂದೂವರೆ ವರ್ಷದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡು ಮಹಿಳೆಯ ಆರೋಗ್ಯ ತೀವ್ರ ಹದಗೆಟ್ಟಿತ್ತು. ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದಾಗ ಕೆಲ ಗಂಟೆಯಲ್ಲೇ ಮೃತಪಟ್ಟಿದ್ದಾರೆ. ಮಕ್ಕಳಾಗಲಿ ಹಾಗೂ ಸಂಬಂಧಿಕರಾಗಲಿ, ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿ ಯಾವುದೇ ದೂರು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಮಹಿಳೆ ಸಾವಿನ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕುಟುಂಬ ಸದಸ್ಯರು ಸಂಪರ್ಕಕ್ಕೆ ಸಿಕ್ಕಿಲ್ಲ.
ಇದನ್ನೂ ಓದಿ :ಬಾಲಕಿ ಮೇಲೆ ದೌರ್ಜನ್ಯ ಆರೋಪ ಪ್ರಕರಣ: ಸಿಐಡಿ ಎದುರು ಹಾಜರಾದ ಯಡಿಯೂರಪ್ಪ - B S Yeddyurappa