ಬೆಂಗಳೂರು: ಭಾರೀ ಅಗ್ನಿ ಅನಾಹುತ ಸಂಭವಿಸಿದ ರಾಜಾಜಿನಗರದ ಎಲೆಕ್ಟ್ರಿಕಲ್ ಬೈಕ್ ಶೋ ರೂಮ್ ಮಾಲೀಕ ಪುನೀತ್ ಗೌಡ ನಾಪತ್ತೆಯಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದುರಂತದಲ್ಲಿ ಸಜೀವ ದಹನವಾಗಿದ್ದ ಪ್ರಿಯಾ ಎಂಬ ಯುವತಿಯ ಸಹೋದರ ಪ್ರತಾಪ್ ನೀಡಿದ ದೂರು ಆಧರಿಸಿ ಶೋ ರೂಮ್ ಮಾಲೀಕ, ಮ್ಯಾನೇಜರ್ ವಿರುದ್ಧ ಬಿಎನ್ಎಸ್ ಸೆಕ್ಷನ್ 106 ಅಡಿಯಲ್ಲಿ (ನಿರ್ಲಕ್ಷ್ಯ ಸಾವು) ಪ್ರಕರಣ ದಾಖಲಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಹೊತ್ತಿಕೊಂಡಿರಬಹುದಾ? ಅಥವಾ ಇವಿ ವಾಹನದ ಬ್ಯಾಟರಿ ಸ್ಫೋಟಗೊಂಡಿರಬಹುದಾ? ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಕಿಯ ಕೆನ್ನಾಲಿಗೆಗೆ ಶೋರೂಂನಲ್ಲಿದ್ದ ಬೈಕ್‌ಗಳು ಸುಟ್ಟು ಕರಕಲಾಗಿವೆ. ಕಟ್ಟಡಕ್ಕೂ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಬಂದು ವೈಜ್ಞಾನಿಕವಾಗಿ ಪರಿಶೀಲಿಸಲಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿರುವ ಪ್ರಿಯಾಳ ಮೃತದೇಹದ ಮರಣೋತ್ತರ ಪರೀಕ್ಷೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ನಡೆಯಲಿದೆ.
ಇದನ್ನೂ ಓದಿ: ಎಲೆಕ್ಟ್ರಿಕಲ್ ಶೋ ರೂಂನಲ್ಲಿ ಬೆಂಕಿ ಅವಘಡ: ಯುವತಿ ಸಜೀವ ದಹನ