ಕಲಬುರಗಿ: ಶಾಲಾ ಬಸ್ಗೆ ಮಗನನ್ನು ಹತ್ತಿಸುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಮೋಹನ್ ಲಾಡ್ಜ್ ಮುಂಭಾಗದ ಮುಖ್ಯರಸ್ತೆಯಲ್ಲಿ ನಿನ್ನೆ(ಸೋಮವಾರ) ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭಾಗ್ಯಶ್ರೀ ಎಂಬವರು ತಮ್ಮ ಮಗನನ್ನು ಶಾಲಾ ಬಸ್ ಹತ್ತಿಸುತ್ತಿದ್ದಾಗ ಮೇಲಿಂದ ವಿದ್ಯುತ್ ತಂತಿ ತುಂಡಾಗಿ ಬಸ್ ಮೇಲ್ಭಾಗಕ್ಕೆ ತಗುಲಿ ಬಸ್ಗೆ ಕರೆಂಟ್ ಪಸರಿಸಿದೆ. ಮೊದಲು ಬಾಲಕನಿಗೆ ವಿದ್ಯುತ್ ಶಾಕ್ ಹೊಡೆದಿದೆ. ನಂತರ ಮಗನ ಕೈ ಹಿಡಿದಿದ್ದ ತಾಯಿಗೂ ಶಾಕ್ ಹೊಡೆದಿದೆ. ಇದರಿಂದಾಗಿ ಮಹಿಳೆ ರಸ್ತೆಯಲ್ಲಿ ಬಿದ್ದು ನರಳಾಡಿದ್ದಾರೆ. ಅವರ ಕೈ, ಕಾಲು, ಹೊಟ್ಟೆಯ ಭಾಗ ಸುಟ್ಟಿದೆ. ಕೂಡಲೇ ಸ್ಥಳೀಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಇದೀಗ ಭಾಗ್ಯಶ್ರೀ ಅವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮಗ ಆಯುಷ್ಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್, ಬಸ್ನಲ್ಲಿದ್ದ 11 ಬುದ್ದಿಮಾಂದ್ಯ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.