ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / state

ಬಲಕ್ಕೆ ಹೃದಯ, ಎಡಕ್ಕೆ ಲಿವರ್​: ವೈದ್ಯ ಲೋಕದಲ್ಲಿ ಅಚ್ಚರಿ ಮೂಡಿಸಿದ ಬೆಳಗಾವಿಯ ವಿಶಿಷ್ಟ ಮಹಿಳೆ! - WORLD HEART DAY

ಬೆಳಗಾವಿಯ ಮಹಿಳೆಯೊಬ್ಬರಿಗೆ ಕೆಲವು ಅಂಗಾಂಗಗಳು ತದ್ವಿರುದ್ಧ ಸ್ಥಾನದಲ್ಲಿದ್ದು, ಅಚ್ಚರಿಗೆ ಕಾರಣವಾಗಿದೆ. ಇವರಿಗೆ ಬಲಕ್ಕೆ ಹೃದಯ, ಎಡಕ್ಕೆ ಯಕೃತ್​ ಇದ್ದು ಅವು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಕುರಿತು ಸ್ವತಃ ಆ ಮಹಿಳೆ ಮತ್ತು ಅವರ ಪತಿ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

ಸವಿತಾ
ತದ್ವಿರುದ್ಧ ಸ್ಥಾನದಲ್ಲಿ ಅಂಗಾಂಗ ಹೊಂದಿರುವ ಮಹಿಳೆ (ETV Bharat)

ಬೆಳಗಾವಿ: ಸಾಮಾನ್ಯವಾಗಿ ಮನುಷ್ಯರಿಗೆ ಎಡಭಾಗದಲ್ಲಿ ಹೃದಯ, ಬಲಭಾಗದಲ್ಲಿ ಲಿವರ್​ ಇರುತ್ತದೆ. ಆದರೆ, ಇಲ್ಲಿನ ಮಹಿಳೆಯೊಬ್ಬರಿಗೆ ಬಲಭಾಗದಲ್ಲಿ ಹೃದಯ, ಎಡಭಾಗದಲ್ಲಿ ಲಿವರ್ ಇದ್ದು, ಆರೋಗ್ಯಕರವಾಗಿ ಕಾರ್ಯ ನಿರ್ವಹಿಸುತ್ತಿವೆ. ಇದು ಸದ್ಯ ವೈದ್ಯಕೀಯ‌ ಲೋಕಕ್ಕೆ ಅಚ್ಚರಿ ಮೂಡಿಸಿದೆ. ವಿಶ್ವ ಹೃದಯ ದಿನದಂದು(ಸೆ.29) ಈ ವಿಶಿಷ್ಟ ಮಹಿಳೆಯ ಕುರಿತಾದ ಅಚ್ಚರಿಯ ಅಂಶಗಳ ಬಗ್ಗೆ ತಿಳಿಯೋಣ..

ಹೌದು, ಬೆಳಗಾವಿ ಟಿಳಕವಾಡಿಯ ಸವಿತಾ ಸುನೀಲ ಚೌಗಲೆ(50) ಅವರೇ ಇಂತಹ ವಿಭಿನ್ನ ದೇಹ ರಚನೆ ಹೊಂದಿರುವ ಅಪರೂಪದ ಮಹಿಳೆ. ಇವರು ಪತಿ ಸುನೀಲ್ ಹಾಗೂ ಮಗ ಸುಮಿತ್ ಜೊತೆಗೆ ಆರೋಗ್ಯಯುತವಾಗಿ ಸಹಜವಾಗಿ ಜೀವನ ನಡೆಸುತ್ತಿದ್ದಾರೆ. ಸವಿತಾ ಅವರ ದೇಹದಲ್ಲಿ ಅಪೆಂಡಿಕ್ಸ್‌ ಉದರದ ಕೆಳಭಾಗದ ಎಡಬದಿ, ಎಡಬದಿಯ ಶ್ವಾಸಕೋಶ ಬಲಬದಿಯಲ್ಲಿ, ಬಲಬದಿಯ ಶ್ವಾಸಕೋಶ ಎಡಬದಿಯಲ್ಲಿವೆ. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ "ಸೈಟಸ್ ಇನ್ವರ್ಸಸ್" ಎಂದು ಕರೆಯಲಾಗುತ್ತದೆ.

ಬಲಕ್ಕೆ ಹೃದಯ, ಎಡಕ್ಕೆ ಯುಕೃತ್ತು ಹೊಂದಿರುವ ಮಹಿಳೆ (ETV Bharat)

37 ವರ್ಷದ ಬಳಿಕ ಸತ್ಯ ಬಯಲು:ಸವಿತಾ ಅವರಿಗೆ ಈಗ 50 ವರ್ಷ ವಯಸ್ಸು. ತಮ್ಮ ದೇಹರಚನೆ ರಹಸ್ಯ ಗೊತ್ತಾಗಿದ್ದು, 13 ವರ್ಷಗಳ ಹಿಂದೆ. ಆಗ ಅವರಿಗೆ 37 ವಯಸ್ಸು. 2011ರಲ್ಲಿ ಕಾರ್ಡಿಯಾಲಾಜಿಸ್ಟ್ ವೈದ್ಯರ ಬಳಿ ಆಗ ಸವಿತಾ ತಪಾಸಣೆಗೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಇಸಿಜಿ, ಎಕ್ಸ್ ರೇ ಮಾಡಿಸಿದಾಗ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಅಚ್ಚರಿಗೊಳಗಾದ ವೈದ್ಯರು ಪರೀಕ್ಷಿಸಿ ಇದನ್ನು ದೃಢಪಡಿಸಿದ್ದರು. ನಂತರ ಸವಿತಾ ಮತ್ತು ಅವರ ಪತಿಗೆ ವೈದ್ಯರು ಮನವರಿಕೆ ಮಾಡಿಕೊಟ್ಟು, ಧೈರ್ಯ ತುಂಬಿದ್ದರು.

ಡಾ. ಮಹಾಂತೇಶ ರಾಮಣ್ಣವರ (ETV Bharat)

ಈ ಅಪರೂಪದ ದೇಹರಚನೆಗೆ 'ಜೆನೆಟಿಕ್' ಕಾರಣ. ಆನುವಂಶಿಕ ಜೀವತಂತುಗಳಲ್ಲಿನ (ಜೀನ್ಸ್) ವ್ಯತ್ಯಾಸ ಭ್ರೂಣ ಬೆಳವಣಿಗೆ ಸಮಯದಲ್ಲಿ ಪರಿಣಾಮ ಬೀರುತ್ತದೆ. ಇಲ್ಲಿನ ಜೀವತಂತುಗಳ ಬದಲಾವಣೆಯಿಂದ (ಜೀನ್ ಮ್ಯುಟೇಶನ್) ಆಗುವ ವ್ಯತಿರಿಕ್ತ ಪರಿಣಾಮದಿಂದಾಗಿ ಅಂಗಾಂಗಗಳ ಸ್ಥಾನ ಪಲ್ಲಟವಾಗಿದೆ. ಇದೊಂದು ಅಪರೂಪದ ಪ್ರಕರಣ. ಇದು ಒಂದು ರೋಗವೂ ಅಲ್ಲ. ಹಾಗಾಗಿ, ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಆದರೆ, ಈ ಬಗ್ಗೆ ಮೊದಲೇ ಯಾರಿಗಾದರೂ ಗೊತ್ತಿದ್ದರೆ ವೈದ್ಯರಿಗೆ ಮುಕ್ತವಾಗಿ ತಿಳಿಸಿದರೆ, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ತುಂಬಾ ಉಪಯುಕ್ತವಾಗಲಿದೆ ಎಂದು ಕೆಎಲ್ಇ ಶ್ರೀ ಬಿ‌.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಮಹಾಂತೇಶ ರಾಮಣ್ಣವರ ವಿವರಿಸಿದರು.

ಸೈಟಸ್ ಇನ್ವರ್ಸಸ್ ಎಂದರೆ ಏನು?ವೈದ್ಯಕೀಯ ಶಾಸ್ತ್ರದಲ್ಲಿ ಹೃದಯ ಬಲಭಾಗದಲ್ಲಿ ಇದ್ದರೆ "ಡೆಸ್ಟ್ರೋಕಾರ್ಡಿಯಾ" ಎನ್ನುತ್ತಾರೆ. ಇನ್ನು ಹೃದಯ ಬಲಭಾಗದಲ್ಲಿ ಇರುವ ಜೊತೆಗೆ ಬಲಭಾಗದಲ್ಲಿ ಇರುವ ಅಂಗಗಳಾದ ಲಿವರ್, ಕಿಡ್ನಿ, ಅಫೆಂಡಿಕ್ಸ್ ಎಡಭಾಗದಲ್ಲಿ ಇರುವುದಕ್ಕೆ "ಸೈಟಸ್ ಇನ್ವರ್ಸಸ್" (ಸಾಮಾನ್ಯ ಮಾನವ ಅಂಗರಚನೆಯ ಪ್ರತಿಬಿಂಬ) ಎಂದು ಕರೆಯಲಾಗುತ್ತದೆ. ಕನ್ನಡಿ ಮುಂದೆ ಓರ್ವ ಮನುಷ್ಯ ನಿಂತಾಗ ಯಾವ ರೀತಿ ವಿರುದ್ಧವಾಗಿ ಕಾಣಿಸುತ್ತದೆಯೋ ಅದೇ ರೀತಿ ಇದು ಕೂಡ ಎನ್ನುತ್ತಾರೆ ಡಾ. ಮಹಾಂತೇಶ ರಾಮಣ್ಣವರ.

ಈ ಬಗ್ಗೆ 'ಈಟಿವಿ ಭಾರತ' ಜೊತೆಗೆ ಮಾತನಾಡಿದ ಸವಿತಾ, ಆರಂಭದಲ್ಲಿ ಸ್ವಲ್ಪ ಆತಂಕವಾಯಿತು. ಆದರೆ, ವೈದ್ಯರು ಧೈರ್ಯ ತುಂಬಿದರು. ಈಗ ನಾನು ಆರಾಮಾಗಿದ್ದೇನೆ. ಇನ್ನು ಡಾ. ಮಹಾಂತೇಶ ರಾಮಣ್ಣವರ ನಮಗೆ ಸಾಕಷ್ಟು ಮಾಹಿತಿ ನೀಡಿ, ನನ್ನಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ. ನಾನು ಓರ್ವ ವಿಶಿಷ್ಟ ದೇಹರಚನೆ ಹೊಂದಿರುವ ಮಹಿಳೆ ಎನ್ನುವುದಕ್ಕೆ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದರು.

ಇನ್ನು, ಡೆಸ್ಟ್ರೋಕಾರ್ಡಿಯಾ ಬಗ್ಗೆ ಅದೆಷ್ಟೋ ವೈದ್ಯರಿಗೂ ಗೊತ್ತಿಲ್ಲ. ಸರ್ಕಾರ ಮತ್ತು ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಬೇಕು. ನನ್ನಂಥೆ ಇರುವ ವ್ಯಕ್ತಿಗಳಿಗೆ ರಸ್ತೆ ಅಪಘಾತ ಸಂಭವಿಸಿದಾಗ ನಮ್ಮನ್ನು ಗುರುತಿಸಲು ಮೆಡಿಕಲ್ ಬ್ರೆಸ್ ಲೇಟ್, ಐಡಿ ಇಲ್ಲವೇ ಟ್ಯಾಟು ಆದರೂ ಹಾಕಿಸಬೇಕು. ಇದರಿಂದ ಸೂಕ್ತ ಚಿಕಿತ್ಸೆ ನೀಡಲು ಅನುಕೂಲ ಆಗುತ್ತದೆ. ಇನ್ನು ತಮ್ಮಂತೆ ದೇಶದ ವಿವಿಧೆಡೆಯ 31 ಜನರನ್ನು ಸಂಪರ್ಕಿಸಿ ಒಂದು ವಾಟ್ಸ್​ ಆ್ಯಪ್​ ಗ್ರೂಪ್​ ರಚಿಸಿದ್ದೇನೆ. ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸುತ್ತಿದ್ದೇನೆ ಎಂದು ಹೇಳಿದರು.

ಸವಿತಾ ಪತಿ, ನ್ಯಾಯವಾದಿ ಸುನೀಲ್ ಚೌಗುಲೆ ಮಾತನಾಡಿ, ವಿಭಿನ್ನ ದೇಹ ರಚನೆ ಹೊಂದಿರುವ ನನ್ನ ಪತ್ನಿಗೆ ಯಾವುದೇ ಆರೋಗ್ಯ ಸಮಸ್ಯೆ ಈವರೆಗೂ ಕಂಡು ಬಂದಿಲ್ಲ. ನಮ್ಮದು 30 ವರ್ಷಗಳ ಅನ್ಯೋನ್ಯ ಸಂಸಾರ. ಹಾಗಾಗಿ, ದಯವಿಟ್ಟು ಎಲ್ಲರೂ ಒಮ್ಮೆ ನಿಮ್ಮ ದೇಹವನ್ನು ಪರೀಕ್ಷಿಸಿರಿ. ಆ ರೀತಿ ಏನಾದರೂ ದೇಹರಚನೆ ಕಂಡು ಬಂದರೆ ಯಾವುದೇ ಕಾರಣಕ್ಕೂ ಭಯ ಬೀಳುವ ಅವಶ್ಯಕತೆ ಇಲ್ಲ. ಸಾಮಾನ್ಯರಂತೆ ಬದುಕು ನಡೆಸಬಹುದು ಎನ್ನುವುದಕ್ಕೆ ನನ್ನ ಪತ್ನಿಯೇ ಸಾಕ್ಷಿ ಎಂದು ಹೇಳಿದರು‌.

ಇದನ್ನೂ ಓದಿ:ವಿಶ್ವ ಹೃದಯ ದಿನ: ಹೃದಯಾಘಾತಕ್ಕೆ ಕಾರಣಗಳೇನು? ಹಾರ್ಟ್​ ಅಟ್ಯಾಕ್​ಗೆ ಯಾವ ಚಿಕಿತ್ಸೆ ನೀಡಲಾಗುತ್ತೆ ಗೊತ್ತಾ? - World Heart Day 2024

ABOUT THE AUTHOR

...view details