ಬೆಳಗಾವಿ: ಜಿಲ್ಲೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಮೃತರನ್ನು ಕಳೆದುಕೊಂಡ ನೋವಿನಿಂದ ರೊಚ್ಚಿಗೆದ್ದ ಕುಟುಂಬಸ್ಥರು ಮಂಗಳವಾರ ಬಿಮ್ಸ್ ಆಸ್ಪತ್ರೆ ಎದುರು ದಿಢೀರ್ ಪ್ರತಿಭಟನೆ ನಡೆಸಿ, ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಮದುರ್ಗ ತಾಲೂಕಿನ ನಾಗನೂರ ತಾಂಡಾದ ಬಾಣಂತಿ ಕಲ್ಪನಾ ಅನಿಲ ಲಮಾಣಿ (26) ಮೃತಪಟ್ಟವರು.
ಬೆಳಗಾವಿಯಲ್ಲಿ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ, ಕುಟುಂಬಸ್ಥರ ಆಕ್ರೋಶ (ETV Bharat) ಏನಾಯ್ತು?:ಮಂಗಳವಾರ ಮಧ್ಯರಾತ್ರಿ 2.30ರ ಸುಮಾರಿಗೆ ಶಸ್ತ್ರಚಿಕಿತ್ಸೆ ಮೂಲಕ ಗಂಡು ಮಗುವಿಗೆ ಕಲ್ಪನಾ ಜನ್ಮ ನೀಡಿದ್ದರು. ಈ ವೇಳೆ ಮಗು ಮತ್ತು ತಾಯಿ ಆರೋಗ್ಯ ಇರುವುದಾಗಿ ವೈದ್ಯರು ಹೇಳಿದ್ದರಂತೆ. ಬೆಳಗ್ಗೆ 8.30ರವರೆಗೂ ಆರೋಗ್ಯವಾಗಿದ್ದ ಕಲ್ಪನಾ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿ ಸಾವುನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕಲ್ಪನಾ ಕುಟುಂಬಸ್ಥರಿಂದ ಪ್ರತಿಭಟನೆ (ETV Bharat) "ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಸಾವಾಗಿದೆ. ಎರಡು ಬಾರಿ ಸಿಜೇರಿಯನ್ ಮಾಡಿದ್ದಾರೆ" ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
"ಹಸಗೂಸು ಆಸ್ಪತ್ರೆಯ ಐಸಿಯುನಲ್ಲಿದೆ. ಆಪರೇಷನ್ ಸಂದರ್ಭದಲ್ಲಿ ಧರಿಸುವ ವಸ್ತ್ರ ಧರಿಸಿಲ್ಲ, ತರಾತುರಿಯಲ್ಲಿ ಸಿಜೇರಿಯನ್ ಮಾಡಿದ್ದಾರೆ. ಆರೋಗ್ಯದಲ್ಲಿ ಏರುಪೇರು ಆದಾಗ ಬೇರೆಡೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಕುಟುಂಬಸ್ಥರು ಮನವಿ ಮಾಡಿದರೂ, ಬೇರೆ ಆಸ್ಪತ್ರೆಗೆ ಕಳುಹಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ನಿರ್ಲಕ್ಷ್ಯ ತೋರಿದ ವೈದ್ಯರನ್ನು ಈ ಕೂಡಲೇ ವಜಾ ಮಾಡಬೇಕು" ಎಂದು ಕಲ್ಪನಾ ಕುಟುಂಬಸ್ಥರು ಪಟ್ಟು ಹಿಡಿದರು.
ಹೆರಿಗೆ ಶಾಸ್ತ್ರ ಮತ್ತು ಶಿಶುವೈದ್ಯಶಾಸ್ತ್ರ ವಿಭಾಗಕ್ಕೆ ಬಿಮ್ಸ್ ನಿರ್ದೇಶಕ ಡಾ.ಅಶೋಕ ಶೆಟ್ಟಿ ಆಗಮಿಸುತ್ತಿದ್ದಂತೆ ಆಸ್ಪತ್ರೆ ಬಾಗಿಲಿನಲ್ಲಿಯೇ ಕಲ್ಪನಾ ಕುಟುಂಬಸ್ಥರು ಘೇರಾವ್ ಹಾಕಿದರು. "ಮಗಳ ಸಾವಿಗೆ ನ್ಯಾಯ ಸಿಗಬೇಕು, ನಮಗೆ ಆದಂತಹ ಪರಿಸ್ಥಿತಿ ಯಾರಿಗೂ ಆಗಬಾರದು. ಈ ಕೂಡಲೇ ನಿರ್ಲಕ್ಷ್ಯ ತೋರಿದ ವೈದ್ಯರ ವಜಾ ಮಾಡಬೇಕು" ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಾ.ಅಶೋಕ ಶೆಟ್ಟಿ, "ಮೂವರು ಸದಸ್ಯರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ಮಾಡಿಸುತ್ತೇನೆ. ತಪ್ಪಿತಸ್ಥ ವೈದ್ಯರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಭರವಸೆ ನೀಡಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆ ಮುಂಭಾಗದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:ಮಂಗಳೂರು: ನವಜಾತ ಶಿಶು ಸಾವು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬೇಕಿದ್ದ ಬಾಣಂತಿ ಆತ್ಮಹತ್ಯೆ