ಕರ್ನಾಟಕ

karnataka

ETV Bharat / state

ಬಟ್ಟೆ ಖರೀದಿಸಿ ಹಣ ಪಾವತಿಸಿರುವುದಾಗಿ ನಕಲಿ ಫೋಟೊ ತೋರಿಸಿ ವಂಚನೆ, ಯುವತಿ ಬಂಧನ - YOUNG WOMAN ARRESTED CHEATING CASE

ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡಿ, ಬಟ್ಟೆ ಅಂಗಡಿಯವರಿಗೆ ಹಣ ಪಾವತಿಯಾಗಿದೆ ಎಂದು ಸುಳ್ಳು ಫೋಟೋ ತೋರಿಸಿ ವಂಚಿಸಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Nov 12, 2024, 9:19 AM IST

ಬೆಂಗಳೂರು: ನಗರದ ಪ್ರತಿಷ್ಠಿತ ಬಟ್ಟೆ ಶೋ ರೂಮ್‌ನಲ್ಲಿ 31 ಸಾವಿರ ರೂ. ಮೌಲ್ಯದ ಬಟ್ಟೆ ಖರೀದಿಸಿ, ನಂತರ ಆನ್‌ಲೈನ್ ಮೂಲಕ ಹಣ ಪಾವತಿಯಾಗಿದೆ ಎಂದು ನಕಲಿ ಫೋಟೋ ತೋರಿಸಿ ವಂಚಿಸಿದ್ದ ಯುವತಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಬಳ್ಳಾಪುರದ ರಶ್ಮಿ (25) ಬಂಧಿತೆ. ಆರೋಪಿ ಸದಾಶಿವನಗರದ ಆರ್‌ಎಂವಿ ಎಕ್ಸ್​ಟೆನ್ಶನ್‌ನಲ್ಲಿರುವ ವಸಿಷ್ಠ ಬೊಟಿಕ್​ ಎಂಬ ಬಟ್ಟೆ ಶೋ ರೂಮ್‌ನಲ್ಲಿ ಅ.29ರಂದು 31,800 ರೂ. ಮೌಲ್ಯದ ಬಟ್ಟೆಗಳನ್ನು ಖರೀದಿಸಿ ವಂಚಿಸಿದ್ದಳು. ಶೋ ರೂಮ್‌ನ ಡಿಸೈನರ್ ಸಂಪದ ಎಂಬವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ರಶ್ಮಿ ನಗರದ ವಿಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಜೊತೆಗೆ ಚಾರ್ಟೆಡ್ ಅಕೌಂಟೆಂಟ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಳೆ. ಅ.29ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ವಸಿಷ್ಠ ಬಟ್ಟೆ ಶೋ ರೂಮ್‌ಗೆ ಬಂದಿದ್ದಾಳೆ. ಡಿಸೈನರ್ ಸಂಪದ ಅವರಿಂದ 31,800 ರೂ. ಮೌಲ್ಯದ ಬಟ್ಟೆಗಳನ್ನು ಖರೀದಿಸಿ, ಸ್ನೇಹಾ ಎಂಬ ಹೆಸರಿನಲ್ಲಿ ಬಿಲ್ ಮಾಡಿಸಿದ್ದಾಳೆ. ಬಳಿಕ ಶೋ ರೂಮ್‌ನಲ್ಲಿದ್ದ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಿರುವುದಾಗಿ ಮೊಬೈಲ್‌ನ ಸ್ಕ್ರೀನ್ ಶಾಟ್ ತೋರಿಸಿದ್ದಾಳೆ. ಆದರೆ, ಶೋ ರೂಮ್ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿರಲಿಲ್ಲ.

ಅಲ್ಲದೆ, ಸಿಬ್ಬಂದಿ ಸಂಪದ ಕೂಡ ಹಣ ಪಾವತಿಯಾಗಿಲ್ಲ ಎಂದಿದ್ದಾರೆ. ಆಗ ರಶ್ಮಿ ಹಣ ಪಾವತಿಯಾಗಿದೆ ಎಂದು ಮತ್ತೊಮ್ಮೆ ತನ್ನ ಮೊಬೈಲ್‌ನಲ್ಲಿ ಫೋಟೋ ತೋರಿಸಿದ್ದಾಳೆ. ಈ ವೇಳೆ ಸಿಬ್ಬಂದಿ ಸಂಪದ ಶೋ ರೂಮ್‌ನ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆಗ ಮಾಲೀಕರು ಸದ್ಯ ಹಣ ಸಂದಾಯವಾಗಿಲ್ಲ. ತಡವಾಗಿ ಹಣ ಸಂದಾಯವಾಗಬಹುದು. ಗ್ರಾಹಕರ ಮೊಬೈಲ್ ಸಂಖ್ಯೆ ಪಡೆದು ಕಳುಹಿಸಿಕೊಡುವಂತೆ ಹೇಳಿದ್ದಾರೆ. ಅದರಂತೆ ಸಂಪದ, ರಶ್ಮಿ ಮೊಬೈಲ್ ಸಂಖ್ಯೆ ಪಡೆದು ಕಳುಹಿಸಿದ್ದಾರೆ.

ಸಂಜೆಯಾದರೂ ಶೋ ರೂಮ್ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ. ಬಳಿಕ ರಶ್ಮಿ ನೀಡಿದ್ದ ಮೊಬೈಲ್ ಸಂಖ್ಯೆಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದರೂ ಪ್ರತಿಕ್ರಿಯೆ ಬಂದಿಲ್ಲ. ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮರುದಿನ ಮತ್ತೊಮ್ಮೆ ಕರೆ ಮಾಡಿದಾಗ, ಪುರುಷನೊಬ್ಬ ಕರೆ ಸ್ವೀಕರಿಸಿ ರಾಂಗ್ ನಂಬರ್ ಎಂದು ಕರೆ ಸ್ಥಗಿತಗೊಳಿಸಿದ್ದಾನೆ. ಬಳಿಕ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ವರ್ಗಾವಣೆ ಮಾಡಿಸಿಕೊಡುವುದಾಗಿ ಡಿಸಿಎಂ, ಸಚಿವರ ಕಾರ್ಯದರ್ಶಿ ಸೋಗಿನಲ್ಲಿ ವಂಚನೆ: ಆರೋಪಿ ಬಂಧನ

ABOUT THE AUTHOR

...view details