ಬೆಂಗಳೂರು: "ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವು ಬಗ್ಗೆ ಮತ್ತೆ ಪರಿಶೀಲನೆ ಮಾಡಲಾಗುತ್ತಿದೆ" ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, "ಹಿಂದೆಯೂ ಅನೇಕ ಸಲ ರಾತ್ರಿ ಸಂಚಾರಕ್ಕೆ ಅವಕಾಶ ಕೊಟ್ಟಿದ್ದಾರೆ. ಜನರು ಮತ್ತು ಪ್ರಾಣಿಗಳಿಗೆ ಸಮಸ್ಯೆ ಆಗುತ್ತೆ ಎನ್ನುವ ಎರಡು ದೃಷ್ಟಿಯಿಂದ ಸಂಚಾರ ನಿಷೇಧ ಮಾಡಲಾಯ್ತು. ಈಗ ಅದನ್ನು ಮತ್ತೆ ಪರಿಶೀಲನೆ ಮಾಡಲಾಗುತ್ತಿದೆ" ಎಂದರು.
ನಾಗೇಂದ್ರ ಅವರನ್ನು ಸಂಪುಟಕ್ಕೆ ಮರುಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಸಿಎಂ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿ, "ನಾಗೇಂದ್ರ ಅವರ ಪಾತ್ರ ವಾಲ್ಮೀಕಿ ಪ್ರಕರಣದಲ್ಲಿ ಏನೂ ಇಲ್ಲವೆಂದು ಕ್ಲೀನ್‌ಚಿಟ್ ಪಡೆದು ಹೊರಬಂದರೆ, ಸಂಪುಟ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಹಿಂದೆ ಕೆ.ಜೆ.ಜಾರ್ಜ್ ಪ್ರಕರಣ ಸೇರಿ ಅನೇಕ ಪ್ರಕರಣಗಳಲ್ಲಿ ಇಂಥದ್ದು ಆಗಿದೆ. ಸಂಪುಟಕ್ಕೆ ನಾಗೇಂದ್ರ ಸೇರ್ಪಡೆ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು" ಎಂದು ಹೇಳಿದರು.
ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡುತ್ತಾ, "ಸಚಿವ ಸಂಪುಟ ವಿಸ್ತರಣೆ ಆಗುವ ಬಗ್ಗೆ ನನಗೆ ಗೊತ್ತಿಲ್ಲ. ಇದೆಲ್ಲ ಸಿಎಂ ಮತ್ತು ಹೈಕಮಾಂಡ್ ನಡುವೆ ನಡೆಯುವ ಚರ್ಚೆ. ಸಿಎಂ ದೆಹಲಿಗೆ ಹಿಂದೆ ಹೋಗಿದ್ದಾಗ, ಈ ವಿಚಾರ ಚರ್ಚೆಗೆ ಬಂದಿತ್ತು. ಡಿಸೆಂಬರ್ಗೆ ಮಾಡಬಹುದು ಅಂತ ಆಗ ಊಹಿಸಲಾಗಿತ್ತು. ನಾವು ಇದಕ್ಕೆ ಉತ್ತರ ಕೊಡಲು ಬರಲ್ಲ" ಎಂದು ತಿಳಿಸಿದರು.
ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಪ್ರಸ್ತಾಪ ವಿಚಾರವಾಗಿ ಮಾತನಾಡಿ, "ಇದರಲ್ಲಿ ತಪ್ಪು ಗ್ರಹಿಕೆ ಆಗಿದೆ. ಕೆಲವು ಶಾಸಕರು, ಮುಖಂಡರು ಗುತ್ತಿಗೆ ಮೀಸಲು ಕೋರಿ ಸಿಎಂಗೆ ಮನವಿ ಪತ್ರ ಕೊಟ್ಟಿದ್ರು. ಸಿಎಂ ಅದನ್ನು ಅಲ್ಪಸಂಖ್ಯಾತ ಇಲಾಖೆಗೆ ಪರಿಶೀಲನೆಗೆ ಕಳಿಸಿದ್ರು. ಇಷ್ಟುಬಿಟ್ಟರೆ ಬೇರೇನೂ ಆಗಿಲ್ಲ. ಏನೇ ತೀರ್ಮಾನ ಆದರೂ ಸಚಿವ ಸಂಪುಟ ಸಭೆಯಲ್ಲೇ ತಗೋಬೇಕು. ಸಂಬಂಧಿಸಿದ ಇಲಾಖೆ ಸಂಪುಟ ಸಭೆಗೆ ಪ್ರಸ್ತಾವನೆ ತಂದು, ತೀರ್ಮಾನ ಆಗಿ ಸರ್ಕಾರಿ ಆದೇಶ ಆಗಬೇಕಾಗುತ್ತದೆ. ಪರಿಶೀಲನೆ ಮಾಡಿ ಅಂದಾಕ್ಷಣ ತೀರ್ಮಾನ ಆದಂತಲ್ಲ" ಎಂದು ಸ್ಪಷ್ಟಪಡಿಸಿದರು.
ದರ್ಶನ್ ಮಧ್ಯಂತರ ತಡೆ ತೆರವು ಕೋರಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ವಿಳಂಬವಾಗಿರುವುದಕ್ಕೆ, "ಮೇಲ್ಮನವಿ ಸಲ್ಲಿಕೆಗೆ ವಿಳಂಬ ಆಗಿಲ್ಲ. ಯಾವ ದಿನಾಂಕದಲ್ಲಿ ಕೇಳಿದ್ದಾರೆ, ಯಾವಾಗ ತೀರ್ಮಾನ ಮಾಡಬೇಕು ಅಂತ ಗೃಹ ಇಲಾಖೆ ಕಾರ್ಯದರ್ಶಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾನೂ ಕೂಡಾ ಅವರಿಗೆ ಮೇಲ್ಮನವಿಗೆ ಹೋಗುವುದಾದರೆ ಹೋಗಿ ಅಂತ ಹೇಳಿದ್ದೇನೆ. ಪ್ರೊಸೀಜರ್ ಅನುಸರಿಸಿಯೇ ಇಂಥ ಕೇಸ್ಗಳಲ್ಲಿ ಮುಂದುವರೆಯಬೇಕು. ಕಾನೂನು ಇಲಾಖೆಯಿಂದ ಮಾಹಿತಿ ತೆಗೆದುಕೊಳ್ಳಬೇಕು, ಗೃಹ ಇಲಾಖೆ ತೀರ್ಮಾನ ತೆಗೆದುಕೊಳ್ಳಬೇಕು, ಪೊಲೀಸ್ ಇಲಾಖೆಯಿಂದ ಪ್ರಸ್ತಾವನೆ ಬರಬೇಕು. ಇದೆಲ್ಲ ಆದ ನಂತರವೇ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ" ಎಂದರು.