ಹುಬ್ಬಳ್ಳಿ:ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲಾಗುವುದು. ರೈತರಿಗೆ ಗುಣಮಟ್ಟದ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ(ಹೆಸ್ಕಾಂ) ಅಧ್ಯಕ್ಷ ಸೈಯದ್ ಅಜ್ಜಂಪೀರ್ ಖಾದ್ರಿ ಹೇಳಿದರು.
ಇಂದು ನವನಗರದ ಹೆಸ್ಕಾಂ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹೆಸ್ಕಾಂ ಉತ್ತರ ಕರ್ನಾಟಕ ಭಾಗದ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಸೇರಿ ಒಟ್ಟು 7 ಜಿಲ್ಲೆಗಳನ್ನು ಒಳಗೊಂಡಿದೆ. ಒಟ್ಟು 62 ಲಕ್ಷ ಗ್ರಾಹಕರಿದ್ದು, 10.49 ಲಕ್ಷ ನೀರಾವರಿ ಪಂಪ್ಸೆಟ್ಗಳಿವೆ. 33.54 ಲಕ್ಷ ಗ್ರಾಹಕರು ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಒಟ್ಟು 467 ವಿವಿಧ ವಿದ್ಯುತ್ ಉಪಕೇಂದ್ರಗಳಿದ್ದು, 4,329 11 ಕೆವಿ ಫೀಡರ್‌ಗಳು ಹಾಗೂ 3.18 ಲಕ್ಷ ವಿತರಣಾ ಪರಿವರ್ತಕಗಳಿವೆ ಎಂದು ಮಾಹಿತಿ ನೀಡಿದರು.
ಒಟ್ಟು 3,937 ಗ್ರಾಹಕರು ಸೌರ ಮೇಲ್ಛಾವಣಿ ಯೋಜನೆಯಡಿ ಸೌರ ವಿದ್ಯುತ್ ಅಳವಡಿಸಿಕೊಂಡು, 89.93 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ಈಗ ಪಿಎಮ್-ಸೂರ್ಯ ಘರ್ ಯೋಜನೆ ಜಾರಿಯಲ್ಲಿದ್ದು, ಗ್ರಾಹಕರು ಅದರ ಪ್ರಯೋಜನ ಪಡೆಯಬೇಕು. ನೀರಾವರಿ ಪಂಪ್ಸೆಟ್ಗಳಿಗೆ ಸೌರ ವಿದ್ಯುತ್ ಒದಗಿಸುವ ಕುಸುಮ್-ಬಿ ಯೋಜನೆಯಡಿ 748 ಗ್ರಾಹಕರು ನೋಂದಾಯಿಸಿದ್ದು, ಅದರಲ್ಲಿ 13 ನೀರಾವರಿ ಪಂಪ್ಸೆಟ್ಗಳು ಕಾರ್ಯಾರಂಭಗೊಂಡಿವೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ನೀರಾವರಿ ಪಂಪ್ಸೆಟ್ಗಳಿಗೆ ಹೆಚ್ಚಿನ ವಿದ್ಯುತ್ ಭಾರವಿರುವ ಉಪಕೇಂದ್ರಗಳ ಸಮೀಪ ಪಿಎಮ್ ಕುಸುಮ್-ಸಿ ಯೋಜನೆ ಅಡಿಯಲ್ಲಿ 415.62 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಹೆಸ್ಕಾಂನಲ್ಲಿ ಪ್ರತೀ ತಿಂಗಳು ಸುಮಾರು 1,595.51 ಮಿಲಿಯನ್ ಯುನಿಟ್‌ಗಳ ವಿದ್ಯುತ್ ಬಳಕೆಯಾಗುತ್ತಿದ್ದು, ಪ್ರತೀ ತಿಂಗಳು ಸರಾಸರಿ ರೂ. 1,016 ಕೋಟಿ ಕಂದಾಯ ಬೇಡಿಕೆ ಇದೆ. ಮುಂದೆ ಬರುವ ಬೇಸಿಗೆ ಕಾಲದಲ್ಲಿ ವಿದ್ಯುತ್ ಬೇಡಿಕೆಯು ಹೆಚ್ಚಾಗುವ ನಿರೀಕ್ಷೆ ಇದ್ದು, ಅದನ್ನು ಪೂರೈಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.