ಕರ್ನಾಟಕ

karnataka

ETV Bharat / state

ಬಂಡಾಯ ಅಭ್ಯರ್ಥಿ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವುದೇ ಬಿಜೆಪಿ?: 22ರವರೆಗೆ ಕಾದುನೋಡಲು ನಿರ್ಧಾರ? - K S Eshwarappa - K S ESHWARAPPA

ಹಿರಿಯ ನಾಯಕ ಕೆ.ಎಸ್.​ಈಶ್ವರಪ್ಪನವರ ವಿಚಾರದಲ್ಲಿ ಆತುರದ ಹೆಜ್ಜೆ ಇಟ್ಟಲ್ಲಿ ಹಿಂದುಳಿದ ವರ್ಗದ ಮತಗಳು ಕೈತಪ್ಪಬಹುದು ಎಂಬ ಕಾರಣಕ್ಕೆ ಬಿಜೆಪಿ ವರಿಷ್ಠರು ಎಚ್ಚರಿಕೆಯಿಂದ ಹೆಜ್ಜೆಯಿಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

leader K S Eshwarappa
ಹಿರಿಯ ನಾಯಕ ಕೆ ಎಸ್​​ ಈಶ್ವರಪ್ಪ

By ETV Bharat Karnataka Team

Published : Apr 12, 2024, 6:04 PM IST

ಬೆಂಗಳೂರು:ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆ.ಎಸ್.ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಮತ್ತಷ್ಟು ದಿನ ಕಾದು ನೋಡುವ ತಂತ್ರಕ್ಕೆ ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ 'ಕೈ'ಗೆ ಅಸ್ತ್ರ ಸಿಗಲಿದೆ. ಇದರಿಂದ ಹಿಂದುಳಿದ ವರ್ಗಗಳ ಮತಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಕಾರಣಕ್ಕಾಗಿ ನಾಮಪತ್ರ ವಾಪಸ್ ಪಡೆಯುವ ಕೊನೆ ಕ್ಷಣದವರೆಗೂ ಈಶ್ವರಪ್ಪಗೆ ಕಾಲಾವಕಾಶ ನೀಡಲು ನಿರ್ಧರಿಸಿದ್ದು ಮನವೊಲಿಕೆ ಕಾರ್ಯದ ಆಯ್ಕೆಯನ್ನು ಮುಕ್ತವಾಗಿರಿಸಿಕೊಂಡಿದ್ದಾರೆ.

ಬಿಜೆಪಿಗೆ ಈಶ್ವರಪ್ಪ ಬಿಸಿತುಪ್ಪ:ರಾಜ್ಯ ಬಿಜೆಪಿಗೆ ಈಶ್ವರಪ್ಪ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. ನುಂಗಲೂ ಆಗದೆ ಉಗುಳಲೂ ಆಗದ ರಾಜ್ಯದ ಬಿಜೆಪಿ ನಾಯಕರು ಹೈಕಮಾಂಡ್ ಕಡೆ ನೋಡುವಂತಾಗಿದೆ. ಬಿಜೆಪಿ ಅಧಿಕೃತ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆದರೂ ರಾಜ್ಯ ಬಿಜೆಪಿ ನಾಯಕರು ತುಟಿ ಬಿಚ್ಚುತ್ತಿಲ್ಲ, ಉಗ್ರವಾಗಿ ಖಂಡಿಸುತ್ತಿಲ್ಲ. ಇದಕ್ಕೆ ಕಾರಣ ಹೈಕಮಾಂಡ್‌ನಿಂದ ಬಂದಿರುವ ನಿರ್ದೇಶನ.

ಬಿಜೆಪಿ ಹೈಕಮಾಂಡ್​ ನಡೆ ಏನು?:ಈಶ್ವರಪ್ಪ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ತಲೆಕೆಡಿಸಿಕೊಳ್ಳುವುದು ಬೇಕಿಲ್ಲ, ಹೈಕಮಾಂಡ್ ಎಲ್ಲವನ್ನೂ ನೋಡಿಕೊಳ್ಳಲಿದೆ ಎಂಬ ಸಂದೇಶವನ್ನು ವರಿಷ್ಠರು ರಾಜ್ಯ ಘಟಕಕ್ಕೆ ಕಳಿಸಿದ್ದಾರೆ. ಜತೆಗೆ ಈಶ್ವರಪ್ಪ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆಯೂ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಈಶ್ವರಪ್ಪ ವಿಚಾರದಲ್ಲಿ ರಾಜ್ಯ ಬಿಜೆಪಿಯ ಅಗ್ರ ನಾಯಕ ಯಡಿಯೂರಪ್ಪ ಸೇರಿದಂತೆ ಎಲ್ಲರೂ ಯಾವುದೇ ಹೇಳಿಕೆ ನೀಡುತ್ತಿಲ್ಲ. ಈಶ್ವರಪ್ಪ ನಡೆಯನ್ನು ಖಂಡಿಸುವ ಅಥವಾ ಅವರ ಮನವೊಲಿಕೆಗೆ ಮುಂದಾಗುವ ಪ್ರಯತ್ನಕ್ಕೆ ಮುಂದಾಗಿಲ್ಲ.

ಕೇಂದ್ರದಲ್ಲಿ 400 ಪ್ಲಸ್ ಸ್ಥಾನದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ಲಾನ್ ಮಾಡಿರುವ ಬಿಜೆಪಿ ವರಿಷ್ಠರು ರಾಜ್ಯದಿಂದಲೂ ಹೆಚ್ಚಿನ ಸ್ಥಾನಗಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಶ್ವರಪ್ಪ ವಿಚಾರದಲ್ಲಿ ಆತುರದ ಹೆಜ್ಜೆ ಇಟ್ಟಲ್ಲಿ ಹಿಂದುಳಿದ ವರ್ಗದ ಮತಗಳ ಮೇಲೆ ಪರಿಣಾಮ ಬೀರಲಿದೆ ಎನ್ನುವ ಕಾರಣಕ್ಕಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ.

ಹಿಂದುಳಿದ ಮತಗಳು ಕೈತಪ್ಪುವ ಭೀತಿ:ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ವಿಚಾರದಲ್ಲಿ ಲಿಂಗಾಯತರನ್ನು ಬಿಜೆಪಿ ಕಡೆಗಣಿಸಿದೆ ಎನ್ನುವ ಅಸ್ತ್ರ ಪ್ರಯೋಗಿಸಿ ಬಿಜೆಪಿಗೆ ಹಿನ್ನೆಡೆಯುಂಟು ಮಾಡುವಲ್ಲಿ ಸಫಲವಾಗಿದ್ದ ಕಾಂಗ್ರೆಸ್ ನಾಯಕರು, ಈಗ ಈಶ್ವರಪ್ಪ ವಿಚಾರದಲ್ಲಿಯೂ ಅದೇ ಅಸ್ತ್ರ ಪ್ರಯೋಗಿಸುವ ಮುನ್ಸೂಚನೆ ಅರಿತಿದ್ದಾರೆ.

ಈಶ್ವರಪ್ಪ ಉಚ್ಚಾಟನೆ ಮಾಡಿದರೆ ಬಿಜೆಪಿ ಹಿಂದುಳಿದ ನಾಯಕರ ಬೆಳವಣಿಗೆ ಸಹಿಸಲ್ಲ, ಹಿಂದುಳಿದ ವರ್ಗದ ವಿರೋಧಿ ಎಂದು ಕಾಂಗ್ರೆಸ್ ಬಿಂಬಿಸಲಿದೆ. ಕಾಂಗ್ರೆಸ್ ಕೈಗೆ ನಾವೇ ಅಸ್ತ್ರ ಕೊಟ್ಟಂತಾಗಲಿದೆ. ಅಲ್ಲದೇ ಹಿಂದುಳಿದ ವರ್ಗದ ಮತಗಳು ದೂರ ಸರಿಯಲೂಬಹುದು ಎನ್ನುವ ಆತಂಕ ವರಿಷ್ಠರಿಗಿದೆ. ಹಾಗಾಗಿ ಈಶ್ವರಪ್ಪ ವಿಚಾರದಲ್ಲಿ ತಕ್ಷಣ ಕ್ರಮದಂತಹ ಹೆಜ್ಜೆ ಇಡದೆ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರಲ್ಲಿ ಈಶ್ವರಪ್ಪ ಕೂಡ ಒಬ್ಬರು. ಯಡಿಯೂರಪ್ಪ ಜತೆಯಾಗಿ ಪಕ್ಷ ಸಂಘಟಿಸಿದ್ದಾರೆ. ಹಾಗಾಗಿ ಆತುರದಲ್ಲಿ ಅವರ ವಿರುದ್ಧ ಕ್ರಮ ನಾಡಿನ ಜನತೆಗೆ ತಪ್ಪು ಸಂದೇಶ ನೀಡಿದಂತಾಗಲಿದೆ. ಇದರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಅವಕಾಶ ನೀಡಬೇಕು ಎನ್ನುವ ನಿರ್ಧಾರಕ್ಕೆ ವರಿಷ್ಠರು ಬಂದಿದ್ದಾರೆ. ಚುನಾವಣೆಗೆ ಬಂಡಾಯವಾಗಿ ಸ್ಪರ್ಧೆ ಮಾಡುವುದಾಗಿ ಈಶ್ವರಪ್ಪ ಪ್ರಕಟಿಸಿದಾಗಲೇ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಪಕ್ಷದ ಭವಿಷ್ಯದ ದೃಷ್ಟಿಯಿಂದ ಮನವೊಲಿಕೆ ಕಾರ್ಯ ನಡೆಸಲಾಯಿತು.

ಮಧ್ಯಪ್ರವೇಶಿಸದ ಆರ್​​​ಎಸ್​​​ಎಸ್​​:ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಖುದ್ದಾಗಿ ಶಿವಮೊಗ್ಗಕ್ಕೆ ತೆರಳಿ ಮಾತುಕತೆ ನಡೆಸಿದರೂ ಈಶ್ವರಪ್ಪ ಬಂಡಾಯದಿಂದ ಹಿಂದೆ ಸರಿಯಲಿಲ್ಲ. ಈಶ್ವರಪ್ಪ ಮನೆ ಬಾಗಿಲಿಗೆ ಹೋಗಲು ಯಡಿಯೂರಪ್ಪ ಸಿದ್ದರಿಲ್ಲ. ರಾಜ್ಯದ ಇತರ ನಾಯಕರು ಈಶ್ವರಪ್ಪ ಜತೆ ಸಂಧಾನ ಮಾಡುವಷ್ಟು ಆತ್ಮೀಯತೆ ಹೊಂದಿಲ್ಲ. ಆರ್‌ಎಸ್‌ಎಸ್ ಕೂಡ ಈ ವಿಚಾರದಲ್ಲಿ ಮಧ್ಯಪ್ರವೇಶಕ್ಕೆ ನಿರಾಕರಿಸಿದೆ. ಹೀಗಾಗಿ ಈಶ್ವರಪ್ಪ ಜತೆ ಸಂಧಾನದ ನಿರ್ಧಾರ ಬಿಟ್ಟು ಕಾದು ನೋಡುವ ತಂತ್ರಕ್ಕೆ ಶರಣಾಗಿದೆ.

ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದರೂ ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 22 ಕಡೆಯ ದಿನ. ಇನ್ನೂ 10 ದಿನ ಸಮಯ ಇದೆ. ಹಾಗಾಗಿ ಕೊನೆ ಕ್ಷಣದವರೆಗೆ ಈಶ್ವರಪ್ಪಗೆ ಕಾಲಾವಕಾಶ ನೀಡಬೇಕು ಎನ್ನುವ ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಈಶ್ವರಪ್ಪ ವಿರುದ್ಧ ಹೇಳಿಕೆ ನೀಡದಂತೆ ಹೈಕಮಾಂಡ್ ಸೂಚನೆ:ಏಪ್ರಿಲ್ 14 ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು ಮೈಸೂರು ಮತ್ತು ಮಂಗಳೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವಿಚಾರ ಸಮಯ ಸಿಕ್ಕಲ್ಲಿ ಈಶ್ವರಪ್ಪ ವಿಚಾರದ ಕುರಿತು ಚರ್ಚೆ ನಡೆಸಲು ರಾಜ್ಯ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಹಾಗಾಗಿ ಈಶ್ವರಪ್ಪ ವಿರುದ್ಧ ಕ್ರಮದ ವಿಚಾರ ಮೋದಿ ರಾಜ್ಯ ಭೇಟಿಯಂದು ನಿರ್ಧಾರವಾಗಲಿದೆ ಎನ್ನಲಾಗಿದೆ.

ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಲು ರಾಜ್ಯ ಬಿಜೆಪಿ ನಾಯಕರು ನಿರಾಕರಿಸುತ್ತಿದ್ದಾರೆ. ಈಶ್ವರಪ್ಪ ವಿರುದ್ಧ ಹೇಳಿಕೆ ನೀಡದಂತೆ ಹೈಕಮಾಂಡ್ ನಿರ್ದೇಶನ ಇರುವ ಹಿನ್ನೆಲೆಯಲ್ಲಿ ನಾಯಕರೆಲ್ಲ ಮೌನವಾಗಿದ್ದಾರೆ.

ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಏನಂತಾರೆ?:ಈಶ್ವರಪ್ಪ ಬಂಡಾಯದ ವಿಚಾರದ ಕುರಿತು ಮಾತನಾಡದ ಯಡಿಯೂರಪ್ಪ, ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೈತಪ್ಪಲು ನಾನು ಕಾರಣ ಅಲ್ಲ, ಹೈಕಮಾಂಡ್ ಎಲ್ಲವನ್ನೂ ನಿರ್ಧಾರ ಮಾಡಿದೆ. ಈಶ್ವರಪ್ಪಗೆ ಸಹಜವಾಗಿ ನೋವಾಗಿದೆ. ಆದರೆ ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಅವರು ನಮ್ಮ ಪಕ್ಷವನ್ನು ಕಟ್ಟಿ ಬೆಳೆಸಿದವರು. ಪುತ್ರನಿಗೆ ಟಿಕೆಟ್ ಸಿಕ್ಕಿಲ್ಲ ಎಂದು ಅವರ ಮನಸ್ಸಿಗೆ ನೋವಾಗಿರಬಹುದು. ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ನಮ್ಮ ಹಿರಿಯರು ಎಲ್ಲರೂ ಸರಿ ಮಾಡಲಿದ್ದಾರೆ ಎನ್ನುತ್ತಿದ್ದಾರೆಯೇ ಹೊರತು ಕ್ರಮದ ಕುರಿತು ಯಾವುದೇ ಹೇಳಿಕೆ ನೀಡುತ್ತಿಲ್ಲ, ಅಂತಹ ಪ್ರಶ್ನೆ ಕೇಳಿದರೆ ಯಾವ ಪ್ರತಿಕ್ರಿಯೆ ನೀಡದೆ ನಿರ್ಗಮಿಸುತ್ತಿದ್ದಾರೆ.

ಇನ್ನು ಈ ಕುರಿತು ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಈಶ್ವರಪ್ಪ ಇಂದು ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ನಾಮಪತ್ರ ವಾಪಸ್ ಪಡೆಯಲು ಇನ್ನೂ ಸಮಯ ಇದೆ. ಈಗಲೇ ಅಂತಿಮ ತೀರ್ಮಾನ ಮಾಡಲಾಗದು, ಎಲ್ಲವನ್ನೂ ಕಾದು ನೋಡಿ ಎಂದರು.

ಇನ್ನು ಬೆಂಗಳೂರಿನಲ್ಲಿ ಈ ಹಿಂದೆ ಈಶ್ವರಪ್ಪ ಬಂಡಾಯದ ವಿಚಾರವಾಗಿ ಮಾತನಾಡಿದ್ದ ವಿಜಯೇಂದ್ರ, ಈಶ್ವರಪ್ಪನವರು ನಮ್ಮ ಹಿರಿಯ ನಾಯಕರು, ಪಕ್ಷ ಕಟ್ಟುವ ಕೆಲಸ ಮಾಡಿದ್ದಾರೆ. ಆದರೆ ತಮ್ಮ ಪುತ್ರನಿಗೆ ಟಿಕೆಟ್ ಸಿಕ್ಕಿಲ್ಲ ಎನ್ನುವ ಅಸಮಾಧಾನ ಇದೆ. ಹಾಗಾಗಿ ಅವರು ಬೇರೆ ನಿರ್ಧಾರಕ್ಕೆ ಬಂದಿದ್ದಾರೆ. ಎಲ್ಲದಕ್ಕೂ ಸಮಯ ಸಂದರ್ಭ ಇದೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​​​ಗೂ ನಮ್ಮ ವಿರುದ್ಧ ತಪ್ಪು ಅಭಿಪ್ರಾಯ ಇದೆ. ಈಶ್ವರಪ್ಪಗೂ ಅದೇ ರೀತಿಯ ತಪ್ಪು ಅಭಿಪ್ರಾಯ ಇದೆ. ಎಲ್ಲವೂ ಸರಿಯಾಗುವ ವಿಶ್ವಾಸವಿದೆ ಎಂದಿದ್ದರು.

ಇನ್ನು ಈಶ್ವರಪ್ಪ ವಿರುದ್ಧ ಯಾವುದೇ ಕ್ರಮದಂತಹ ವಿಚಾರ ತೆಗೆದುಕೊಳ್ಳಬೇಕು ಎಂದರೂ ದೆಹಲಿ ಮಟ್ಟದಲ್ಲಿ ತೀರ್ಮಾನ ಮಾಡಬೇಕು. ನಾವು ಇಲ್ಲಿ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ, ಇನ್ನೂ ಕಾಲ ಮಿಂಚಿಲ್ಲ. ಪರಿಸ್ಥಿತಿ ತಿಳಿಯಾಗುವ ಆಶಾಭಾವನೆ ಇದೆ ಎಂದು ಈಶ್ವರಪ್ಪ ವಿರುದ್ಧದ ಕ್ರಮದ ಕುರಿತು ವಿಜಯೇಂದ್ರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ ಲೋಕಸಭೆಗೆ ಈಶ್ವರಪ್ಪ ನಾಮಪತ್ರ ಸಲ್ಲಿಕೆ: ಎದುರಾಳಿಗಳಿಗೆ ತಿರುಗೇಟು - Eshwarappa Nomination

ABOUT THE AUTHOR

...view details