ಬೆಂಗಳೂರು : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಆತನ ಪತ್ನಿ ಹಾಗೂ ಪ್ರಿಯಕರನ ಸೇರಿ ಕೊಲೆಗೈದಿರುವ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೈಟ್‌ಫೀಲ್ಡ್‌ನ ಹಗದೂರು ನಿವಾಸಿ ಮಹೇಶ್ (36) ಕೊಲೆಯಾದ ವ್ಯಕ್ತಿ. ಅವರ ಪತ್ನಿ ತೇಜಸ್ವಿನಿ ಮತ್ತು ಆಕೆಯ ಪ್ರಿಯಕರ ಗಜೇಂದ್ರ (35) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳು ಆಗಸ್ಟ್ 9ರಂದು ಮಹೇಶ್ ಕತ್ತು ಹಿಸುಕಿ ಕೊಲೆಗೈದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಹಾಸನದ ಅರಕಲಗೂಡಿನ ದೊಂಬರಪಾಳ್ಯ ನಿವಾಸಿಯಾಗಿದ್ದ ಮಹೇಶ್ ಮತ್ತು ತೇಜಸ್ವಿನಿ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ವೈಟ್‌ಫೀಲ್ಡ್‌ನ ಹಗದೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಹೇಶ್ ಆಟೋ ಚಾಲಕನಾಗಿದ್ದು ರಂಗೋಲಿ ಪುಡಿ ಮಾರಾಟ ಮಾಡಿಕೊಂಡಿದ್ದ. ತೇಜಸ್ವಿನಿ ಖಾಸಗಿ ಫೈನಾನ್ಸ್‌ನ ಕಂಪನಿಯೊಂದರ ಸಾಲ ವಸೂಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದೊಂದು ವರ್ಷದಿಂದ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಅಲ್ಲದೆ ತೇಜಸ್ವಿನಿ ತನ್ನ ಸಹೋದ್ಯೋಗಿ ಗಜೇಂದ್ರನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಪತಿ ಮಹೇಶ್, ಪತ್ನಿಗೆ ಬುದ್ದಿವಾದ ಹೇಳಿ, ಎಚ್ಚರಿಕೆ ನೀಡಿದ್ದ. ಅಲ್ಲದೆ, ಗಜೇಂದ್ರನಿಗೂ ಕರೆ ಮಾಡಿ ಎಚ್ಚರಿಸಿದ್ದ. ಆದರೂ ಸಹ ಇಬ್ಬರೂ ತಮ್ಮ ಸಂಬಂಧ ಮುಂದುವರೆಸಿದ್ದರು. ಶುಕ್ರವಾರ ಮಧ್ಯಾಹ್ನ ತೇಜಸ್ವಿನಿ ಮತ್ತು ಗಜೇಂದ್ರ ಮನೆಯಲ್ಲಿ ಇದ್ದಾಗ ಮಹೇಶ್ ಕೂಡ ಮನೆಗೆ ಬಂದಿದ್ದ. ಇಬ್ಬರನ್ನು ಕಂಡ ಮಹೇಶ್, ಪತ್ನಿ ಮೇಲೆ ಹಲ್ಲೆೆ ನಡೆಸಿದ್ದ. ಅದನ್ನು ತಡೆಯಲು ಗಜೇಂದ್ರ ಮುಂದಾದಾಗ ಆತನ ಮೇಲೆಯೂ ಮಹೇಶ್ ಹಲ್ಲೆ ಮಾಡಿದ್ದ. ಆ ಸಂಧರ್ಭದಲ್ಲಿ ತೇಜಸ್ವಿನಿ ಮತ್ತು ಗಜೇಂದ್ರ ಸೇರಿ ಮಹೇಶ್‌ನ ಕತ್ತು ಹಿಸುಕಿ ಕೊಲೆಗೈದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಳಿಕ 'ಗಂಡ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ' ಎಂದು ಪತ್ನಿ ತೇಜಸ್ವಿನಿ ನಾಟಕವಾಡಿದ್ದಳು. ಆದರೆ, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಜೊತೆಗೆ, ಪ್ರಿಯಕರ ಕೃತ್ಯಕ್ಕೆ ಗಜೇಂದ್ರನ ಸಹಕಾರದ ಬಗ್ಗೆಯೂ ಹೇಳಿಕೆ ನೀಡಿದ್ದಾಳೆ. ಘಟನೆ ಸಂಬಂಧ ಇಬ್ಬರನ್ನೂ ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮಂಡ್ಯ: ಪೊಲೀಸರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ; ರೌಡಿಶೀಟರ್ ಕಾಲಿಗೆ ಗುಂಡೇಟು - Police Firing on Rowdy Sheeter