ಬೆಂಗಳೂರು:ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ಹಣದ ಅವ್ಯವಹಾರ ಹಗರಣದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸದ ರಾಜ್ಯ ಸಿಐಡಿ ಪೊಲೀಸರ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಏಕೆ ವಹಿಸಬಾರದು ಎಂದು ರಾಜ್ಯ ಸರ್ಕಾರವನ್ನು ಮೌಖಿಕವಾಗಿ ಪ್ರಶ್ನಿಸಿದೆ.
ಹಗರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಪ್ರಕರಣದ 7 ಮತ್ತು 8ನೇ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸರ್ಕಾರದ ತನಿಖೆಯ ವೈಖರಿಯನ್ನು ಆಕ್ಷೇಪಿಸಿದರು. ಅಲ್ಲದೇ, ಪ್ರಕರಣವು ಸಂಬಂಧ 2023ರಲ್ಲಿ ಎಫ್‌ಐಆರ್ ದಾಖಲಾಗಿದೆ. ಮೊದಲಿಗೆ 8 ಮಂದಿ ಆರೋಪಿಗಳಿದ್ದರು. ಸದ್ಯ 14 ಆರೋಪಿಗಳಿದ್ದಾರೆ.
1, 2, 3 ಮತ್ತು 5ನೇ ಆರೋಪಿಗಳನ್ನ ವಿಚಾರಣೆಗೆ ಏಕೆ ಕರೆದಿಲ್ಲ?:ಸರ್ಕಾರಿ ಅಭಿಯೋಜಕ ಹೇಳುವ ಪ್ರಕಾರವೇ ಭೋವಿ ಅಭಿವೃದ್ಧಿ ನಿಗಮದಲ್ಲಿ 100 ಕೋಟಿಗಿಂತ ಅಧಿಕ ಮೊತ್ತದ ಹಗರಣ ನಡೆದಿದೆ. ಇಷ್ಟು ದೊಡ್ಡ ಮೊತ್ತದ ಹಗರಣ ನಡೆದಿದೆ. ಆದರೆ, ಪ್ರಕರಣ ದಾಖಲಾಗಿ 20 ತಿಂಗಳು ಕಳೆದಿದ್ದರೂ 1, 2, 3 ಮತ್ತು 5ನೇ ಆರೋಪಿಯನ್ನು ವಿಚಾರಣೆಗೆ ಕರೆದಿಲ್ಲ. ಅವರು ಸಹ ಯಾವುದೇ ಕೋರ್ಟ್‌ನಿಂದ ಜಾಮೀನು ಪಡೆದಿಲ್ಲ. ಇದು ರಾಜ್ಯ ಸರ್ಕಾರ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ ಎನ್ನುವುದನ್ನು ತೋರಿಸುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ನುಡಿದಿದೆ.
ಅಲ್ಲದೇ, ಪ್ರಕರಣ ಕುರಿತು ರಾಜ್ಯ ಸರ್ಕಾರವು ಬಸವನ ಹುಳ ತೆವಳುವಂತೆ ನಿಧಾನಗತಿಯಲ್ಲಿ ತನಿಖೆ ನಡೆಸುತ್ತಿದೆ. ಇದು ಸಿಬಿಐ ತನಿಖೆಗೆ ವಹಿಸಲು ಅರ್ಹ ಪ್ರಕರಣವಾಗಿದೆ. ಆದ್ದರಿಂದ ಏಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬಾರದು? ಪ್ರಕರಣದ 1, 2, 3 ಮತ್ತು 5ನೇ ಆರೋಪಿಗಳು ವಿಚಾರಣೆ ಎದುರಿಸಿದ್ದಾರೆಯೇ? ಮತ್ತು ಅವರು ಯಾವುದೇ ಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆಯೇ? ಎಂಬ ಬಗ್ಗೆ ಅರ್ಜಿಯ ಮುಂದಿನ ವಿಚಾರಣೆ ವೇಳೆ ವಿವರಣೆ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿತು.