ಬೆಳಗಾವಿ: ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಶೋಷಣೆ ಮತ್ತು ಅನ್ಯಾಯ ನಡೆದರೆ ಅದರಲ್ಲಿ ಮೋದಿ ತಪ್ಪು ಇರೋದಿಲ್ಲ. ಚಂದ್ರಯಾನ ಯಶಸ್ವಿಯಾದರೆ, ಕೊರೊನಾ ಲಸಿಕೆಯಲ್ಲಿ ಸಾಧನೆ ಮೆರೆದರೆ, ಕಾಮನವೆಲ್ತ್ ಕ್ರೀಡಾಕೂಟದಲ್ಲಿ ವಿಜೇತರಾದರೆ ಅದರ ಶ್ರೇಯಸ್ಸು ಮೋದಿ ಪಡೆಯುತ್ತಾರೆ. ಸಾಧನೆ ಕೀರ್ತಿ ಪಡೆಯುವ ಪ್ರಧಾನಿ ಇಂಥ ಘಟನೆಗಳು ನಡೆದಾಗ ಏಕೆ ನುಣುಚಿಕೊಳ್ಳುತ್ತಾರೆ ಎಂದು ಎಐಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷೆ ಸುಪ್ರೀಯಾ ಶ್ರಿನೇಟಿ ಪ್ರಶ್ನಿಸಿದರು.
ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಹಾಸನ ಪೆನ್ಡ್ರೈ ಪ್ರಕರಣ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮೊದಲೇ ತಿಳಿದಿದ್ದರೂ ಹಾಸನ ಟಿಕೆಟ್ ನೀಡಿದ್ದು ದುರ್ದೈವದ ಸಂಗತಿ. ಅವರಿಗೆ ಹಾಸನ ಟಿಕೆಟ್ ಕೊಟ್ಟು ಮೈಸೂರಿನಲ್ಲಿ ಬಿಜೆಪಿ ನಡೆಸಿದ ಸಮಾವೇಶದಲ್ಲಿ ಪ್ರಜ್ವಲ್ ರೇವಣ್ಣನ ಬೆನ್ನು ತಟ್ಟಿ ಮತ ನೀಡುವಂತೆ ಯಾವ ಮುಖ ಇಟ್ಟುಕೊಂಡು ಮತಯಾಚನೆ ಮಾಡಿದರು ಎಂದು ಪ್ರಶ್ನಿಸಿದರು.
''ಇನ್ನು ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಸ್ಮೃತಿ ಇರಾನಿ ಸೇರಿ ಎಲ್ಲರೂ ಮೌನ ವಹಿಸಿದ್ದಾರೆ. ಇಂಥ ವಿಚಾರದಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗಿದ್ದಾರೆ. ಮಣಿಪುರ, ಹತ್ರಾಸ್ ಈಗ ಹಾಸನ ಪೆನ್ಡ್ರೈವ್ ಪ್ರಕರಣವನ್ನೂ ಯಾವ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿಲ್ಲ. ಯಾವುದೇ ರೀತಿ ಚರ್ಚೆ ಆಗುತ್ತಿಲ್ಲ. ಅಲ್ಲದೇ ಕೇಂದ್ರ ಸರ್ಕಾರದ ಸಹಕಾರದಿಂದ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಓಡಿ ಹೋಗಿದ್ದಾರೆ'' ಎಂದು ಆರೋಪಿಸಿದರು.