ಬೆಂಗಳೂರು: ರಾಜ್ಯದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅಧಿಕಾರವಧಿ ಜುಲೈ 31ಕ್ಕೆ ಕೊನೆಗೊಳ್ಳುತ್ತಿದೆ. ಜೇಷ್ಠತೆಯ ಆಧಾರದಲ್ಲಿ ಈ ಹುದ್ದೆಗೆ ಕ್ರಮವಾಗಿ ಅಜಯ್ ಸೇಠ್ ಮತ್ತು ಶಾಲಿನಿ ರಜನೀಶ್ ಇದ್ದಾರೆ. ಅಜಯ್ ಸೇಠ್ ಕೇಂದ್ರದಲ್ಲಿ ಮಹತ್ವದ ಹುದ್ದೆಯಲ್ಲಿದ್ದರೆ, ಶಾಲಿನಿ ರಜನೀಶ್ ಅಭಿವೃದ್ಧಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಹೆಸರೂ ಕೇಳಿ ಬರುತ್ತಿದೆ.
ಮುಂಚೂಣಿಯಲ್ಲಿ ಶಾಲಿನಿ ರಜನೀಶ್:ರಜನೀಶ್ ಗೋಯಲ್ ಪತ್ನಿಶಾಲಿನಿ ರಜನೀಶ್ ಹೆಸರು ಸಿಎಸ್ ರೇಸ್ನಲ್ಲಿ ಮುಂಚೂಣಿಯಲ್ಲಿದೆ. ಮಹತ್ವದ ಹುದ್ದೆಗೆ ಶಾಲಿನಿ ನೇಮಕಗೊಂಡರೆ, ರಾಜ್ಯ ಕಾರ್ಯಾಂಗದ ಅತ್ಯುನ್ನತ ಹುದ್ದೆಯನ್ನು ಪತಿಯ ನಂತರ ಪತ್ನಿ ವಹಿಸಿಕೊಳ್ಳುವುದು ಇದು ಎರಡನೇ ಬಾರಿ. 2000ರ ಡಿಸೆಂಬರ್‌ನಲ್ಲಿ ಬಿ.ಕೆ.ಭಟ್ಟಾಚಾರ್ಯ ನಂತರ ಅವರ ಪತ್ನಿ ಥೆರೇಸಾ ಭಟ್ಟಾಚಾರ್ಯ ಸಿಎಸ್ ಆಗಿದ್ದರು.
ಶಾಲಿನಿ ರಜನೀಶ್ 1989 ಬ್ಯಾಚ್‌ನ ಐಎಎಸ್ ಅಧಿಕಾರಿ. ಇವರಿಗೆ ಇನ್ನೂ 3 ವರ್ಷದ ಸೇವಾವಧಿ ಇದೆ.
ಅಜಯ್ ಸೇಠ್ ರಾಜ್ಯಕ್ಕೆ ಮರಳುವುದು ಅನುಮಾನ?:ಜೇಷ್ಠತೆಯ ಪ್ರಕಾರ ನೋಡುವುದಾದರೆ, ಅಜಯ್ ಸೇಠ್ ಹಿರಿಯ ಐಎಎಸ್ ಅಧಿಕಾರಿ. ಇವರ ಬಳಿಕ ಶಾಲಿನಿ ರಜನೀಶ್ ಹಿರಿಯರು. ಆದರೆ ಸೇಠ್ ಕೇಂದ್ರದಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿ ಮಹತ್ವದ ಹುದ್ದೆಯಲ್ಲಿದ್ದು, ರಾಜ್ಯಕ್ಕೆ ಮರಳುವುದು ಅನುಮಾನ ಎಂದು ಹೇಳಲಾಗುತ್ತಿದೆ.