ಮೈಸೂರು:ಪ್ರತಿಷ್ಠಿತ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳು ಯಾರು ಎಂಬ ಪ್ರಶ್ನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ಬಿಜೆಪಿಯ ಹಾಲಿ ಸಂಸದ ಪ್ರತಾಪ್ ಸಿಂಹ ನಾನೇ ಅಭ್ಯರ್ಥಿ ಎಂದು ಪ್ರಚಾರ ಶುರು ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್ ಬೇರೆ ಅಭ್ಯರ್ಥಿಯ ಹುಡುಕಾಟದಲ್ಲಿ ಇದೆ ಎನ್ನಲಾಗುತ್ತಿದೆ. ಇದರ ಜೊತೆಗೆ ಕಾಂಗ್ರೆಸ್ನಿಂದ ಪ್ರಬಲ ಅಭ್ಯರ್ಥಿಗಳು ಇಲ್ಲದೇ ಇರುವುದರಿಂದ ಯಾರು ಕಾಂಗ್ರೆಸ್ ಅಭ್ಯರ್ಥಿ ಆಗುತ್ತಾರೆ ಎನ್ನುವುದು ಈಗ ಪ್ರಶ್ನೆಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಎಂಬ ಕಾರಣಕ್ಕಾಗಿ ಈ ಬಾರಿ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ ಪ್ರತಿಷ್ಠಿತ ಕ್ಷೇತ್ರವಾಗಿದೆ. ಒಂದೆಡೆ ಕಾಂಗ್ರೆಸ್ ಈ ಬಾರಿ ಈ ಕ್ಷೇತ್ರವನ್ನು ಬಿಜೆಪಿಯಿಂದ ಪಡೆಯುವ ತವಕದಲ್ಲಿದ್ದರೆ, ಮತ್ತೊಂದೆಡೆ ಸಮರ್ಥ ಅಭ್ಯರ್ಥಿಗಳು ಇಲ್ಲದೇ ಇರುವುದು ಕಾಂಗ್ರೆಸ್ಗೆ ಗೆಲುವಿನ ಚಿಂತೆ ತರಿಸಿದೆ. ಇದಕ್ಕಾಗಿ ಸಮರ್ಥ ಅಭ್ಯರ್ಥಿಗಳ ಹುಡುಕಾಟದಲ್ಲಿದೆ ಕಾಂಗ್ರೆಸ್.
ಕಾಂಗ್ರೆಸ್ನಿಂದ ಸಂಭಾವ್ಯ ಅಭ್ಯರ್ಥಿಗಳು ಯಾರು?:ಮೈಸೂರು - ಕೊಡಗು ಲೋಕಸಭಾ ಕ್ಷೇತ್ರವು ಕಳೆದ ಹತ್ತು ವರ್ಷಗಳಿಂದ ಬಿಜೆಪಿ ವಶದಲ್ಲಿದೆ. ಈ ಬಾರಿ ಕಾಂಗ್ರೆಸ್ ಗೆಲ್ಲಲು ಪ್ಲಾನ್ ಮಾಡಿದ್ದು, ಅದಕ್ಕಾಗಿ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ಇದೆ. ಅದರಲ್ಲಿ ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅಭ್ಯರ್ಥಿಯಾಗುತ್ತಾರೆ ಎಂದು ಕಳೆದ ಆರು ತಿಂಗಳುಗಳಿಂದ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಯತೀಂದ್ರ ಸಿದ್ದರಾಮಯ್ಯ ನಾನು ಲೋಕಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಯಲ್ಲ. ಒಂದು ವೇಳೆ, ಪಕ್ಷ ತೀರ್ಮಾನ ಮಾಡಿದರೆ ಒಪ್ಪಿಕೊಳ್ಳುವುದು ಅನಿವಾರ್ಯ ಎಂದು ಹೇಳಿದ್ದಾರೆ. ಇದರ ಜೊತೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲಿತ ಡಾ.ಸುಶ್ರುತ ಗೌಡ ಹೆಸರು ಕೂಡ ಕೇಳಿ ಬರುತ್ತಿದೆ. ಅದಲ್ಲದೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಜಿ. ವಿಜಯಕುಮಾರ್ ಹಾಗೂ ಸಿದ್ದರಾಮಯ್ಯ ಆಪ್ತ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಹೆಸರುಗಳು ಕೇಳಿ ಬರುತ್ತಿದೆ. ಹೀಗಿರುವಾಗ ಕಾಂಗ್ರೆಸ್ನಿಂದ ಹೊಸ ಅಭ್ಯರ್ಥಿಗಳ ಹೆಸರು ಮುಂಚೂಣಿಗೆ ಬಂದರೂ ಆಶ್ಚರ್ಯ ಇಲ್ಲ.
ಬಿಜೆಪಿ ಅಭ್ಯರ್ಥಿ ಯಾರು ಎಂಬುವುದು ನಿಗೂಢ: ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಳೆದ 2 ಬಾರಿಯೂ ಸಂಸದ ಪ್ರತಾಪ್ ಸಿಂಹ ಬಿಜೆಪಿ ಅಭ್ಯರ್ಥಿಯಾಗಿದ್ದು, ಈ ಬಾರಿಯೂ ಮೂರನೇ ಸಲ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಇದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಕೆಲಸ ಶುರು ಮಾಡಿರುವ ಪ್ರತಾಪ್ ಸಿಂಹಗೆ ಮತ್ತೆ ಟಿಕೆಟ್ ನೀಡದಂತೆ ಸ್ಥಳೀಯ ಬಿಜೆಪಿ ನಾಯಕರು ತೆರೆಮರೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಬಿಜೆಪಿಯಿಂದ ಟಿಕೆಟ್ ಪಡೆಯುವ ಪ್ರತಾಪ್ ಸಿಂಹ ಪ್ರಯತ್ನ ಮುಂದುವರೆದಿದ್ದು, ಬಿಜೆಪಿ ಹೈಕಮಾಂಡ್ ಹೊಸ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿದೆ.