ಬೆಂಗಳೂರು:ಪ್ರಧಾನಿಯೇ ಬಂಡವಾಳ ಹೂಡಿಕೆದಾರರಿಗೆ ಗುಜರಾತ್‌ನಲ್ಲಿ ಅಥವಾ ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡುವಂತೆ ಕರೆ ಮಾಡಿ ಹೇಳಿದರೆ ನಾವೇನು ಮಾಡುವುದು? ಎಂದು ಸಚಿವ ಪ್ರಿಯಾಂಕ್ ಖರ್ಗೆ ದೂರಿದ್ದಾರೆ.
ವಿಕಾಸಸೌಧದಲ್ಲಿ ಇಂದು ಮಾತನಾಡಿದ ಅವರು, ನಾವೇ ರಾಜ್ಯಕ್ಕೆ ಬಂಡವಾಳ ಆಕರ್ಷಿಸುತ್ತೇವೆ. ಕಂಪನಿಗಳನ್ನು ರಾಜ್ಯಕ್ಕೆ ತರುತ್ತೇವೆ. ಎಲ್ಲವನ್ನೂ ನಾವೇ ಮಾಡಿ ಕೊನೆಗೆ ಗುಜರಾತ್ ಅಥವಾ ಉತ್ತರ ಪ್ರದೇಶಕ್ಕೆ ಕಂಪನಿಗಳು ಹೋಗುತ್ತವೆ. ಪ್ರಧಾನಿ ಕಚೇರಿಯಿಂದ ಕರೆ ಮಾಡಿ ಉದ್ಯಮಿಗಳಿಗೆ ಗುಜರಾತ್‌ನಲ್ಲಿ ಬಂಡವಾಳ ಹೂಡಿ ಅಂತಾರೆ. ಹೀಗಾಗಿ ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರ ಗುಜರಾತ್ಗೆ ಕೊಟ್ಟಂತೆ ನಮಗೂ ಸಹಾಯಧನ ನೀಡಬೇಕು. ನಾನು ದೆಹಲಿಗೆ ಹೋಗಿ ನಮಗೂ ಸಬ್ಸಿಡಿ ಕೊಡುವಂತೆ ಕೇಂದ್ರ ಹಣಕಾಸು ಸಚಿವೆಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
6.28 ಬಿಲಿಯನ್ ಡಾಲರ್ ಹೂಡಿಕೆ ನಿರೀಕ್ಷೆ: ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಯ ನಿಯೋಗ ಹೂಡಿಕೆಗಳನ್ನು ಆಕರ್ಷಿಸಲು, ಸ್ಟಾರ್ಟ್-ಅಪ್‌ಗಳನ್ನು ಪ್ರದರ್ಶಿಸಲು ಮತ್ತು ಅಂತಾರಾಷ್ಟ್ರೀಯ ತಂತ್ರಜ್ಞಾನ ಮತ್ತು ನಾವೀನ್ಯತೆ ಸಹಯೋಗವನ್ನು ಉತ್ತೇಜಿಸಲು ಕ್ಯಾಲಿಫೋರ್ನಿಯಾ ಮತ್ತು ಮ್ಯಾಸಚೂಸೆಟ್ಸ್‌ಗೆ ಭೇಟಿ ನೀಡಿ ಜೂನ್ 4ರಿಂದ ಜೂನ್ 7ರವರೆಗೆ ಅಮೆರಿಕದಾದ್ಯಂತ ಅಂತಾರಾಷ್ಟ್ರೀಯ ರೋಡ್ ಶೋ ನಡೆಸಲಾಗಿದೆ. ವಿವಿಧ ಸಂಸ್ಥೆಗಳೊಂದಿಗೆ ರಾಜ್ಯದಲ್ಲಿ ಹೂಡಿಕೆ ನಡೆಸುವ ಬಗ್ಗೆ ಚರ್ಚೆ ನಡೆಸಿದ್ದೇವೆ. ರಾಜ್ಯಕ್ಕೆ ಸುಮಾರು 6.28 ಬಿಲಿಯನ್ ಡಾಲರ್ ಹೂಡಿಕೆಯ ನಿರೀಕ್ಷೆ ಇದೆ ಎಂದು ಸಚಿವರು ತಿಳಿಸಿದರು.
ಗುಜರಾತ್, ಆಂಧ್ರ, ತೆಲಂಗಾಣ ರಾಜ್ಯಗಳ ಜೊತೆ ನಮ್ಮ ಸ್ಪರ್ಧೆ ಇಲ್ಲ. ನಮ್ಮ ಸ್ಪರ್ಧೆ ಇರುವುದು ಟೊಕಿಯೋ, ತೈವಾನ್, ಚೀನಾ, ಲಂಡನ್ ಜೊತೆಗೆ. ನವೋದ್ಯಮದಲ್ಲಿ ಹೇಗೆ ಉತ್ತೇಜನ ಕೊಡಬಹುದು ಎಂಬ ಬಗ್ಗೆ ನೀಲನಕ್ಷೆ ಹಾಕಿದ್ದೇವೆ. ಬಂಡವಾಳ ಆಕರ್ಷಣೆ ನಮ್ಮ ಮೂಲ ಉದ್ದೇಶ. ನಮ್ಮ ನಿಯೋಗವು ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗಾಗಿ ಜಾಗತಿಕ ಉದ್ಯಮ ಸಂಘ SEMIಯನ್ನು ಭೇಟಿ ಮಾಡಿದೆ. ಮುಂಬರುವ ಸೆಮಿಕಾನ್ ಇಂಡಿಯಾ ಸಮಾವೇಶದಲ್ಲಿ ಕರ್ನಾಟಕದ ಭಾಗವಹಿಸುವಿಕೆಯನ್ನು ಗರಿಷ್ಠಗೊಳಿಸುವುದು ಮತ್ತು ಮೆಡ್-ಟೆಕ್ ಮತ್ತು ಆಟೋಮೋಟಿವ್-ಟೆಕ್‌ನಲ್ಲಿ ಭವಿಷ್ಯದ ವಿಶೇಷ ಸೆಮಿಕಂಡಕ್ಟರ್ ಅಪ್ಲಿಕೇಶನ್‌ಗಳ ಬಗ್ಗೆ ನಿಯೋಗ ಚರ್ಚಿಸಿದೆ ಎಂದು ವಿವರಿಸಿದರು.
ಇದನ್ನೂ ಓದಿ:ಹೆಚ್ಚುವರಿ ಹಾಲಿಗೆ 2 ರೂಪಾಯಿ ನಿಗದಿಪಡಿಸಲಾಗಿದೆಯೇ ಹೊರತು ಹಾಲಿನ ಬೆಲೆ ಏರಿಸಿಲ್ಲ: ಸಿಎಂ - CM Siddaramaiah