ಕರ್ನಾಟಕ

karnataka

ETV Bharat / state

ತುಂಗಭದ್ರಾ ಡ್ಯಾಂನಿಂದ 3.5ಲಕ್ಷ ಕ್ಯೂಸೆಕ್‌ ನೀರು ಬಿಟ್ಟರೆ ಏನೆಲ್ಲ ಅಪಾಯ; ಹೊಸ ಗೇಟ್​​ ಅಳವಡಿಕೆ ಯಾವಾಗ? - TB Dam Current Development - TB DAM CURRENT DEVELOPMENT

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್​​​ ಗೇಟ್​ನ್ನು​ ಈಗಾಗಲೇ ತಜ್ಞರು ಪರಿಶೀಲಿಸಿ ಸರಿಪಡಿಸಲು ವಿವಿಧ ಪ್ಲಾನ್​ ಮಾಡಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ 3.5 ಲಕ್ಷ ಕ್ಯೂಸೆಕ್‌ ಡ್ಯಾಂ ನಿಂದ ನೀರು ಬಿಟ್ಟರೆ ಏನೆಲ್ಲ ಆಗಬಹುದು ಗೊತ್ತಾ? ಇಲ್ಲಿದೆ ಗೇಟ್​ ನಂಬರ್ 19ನ ಕಂಪ್ಲೀಟ್​ ಮಾಹಿತಿ. ​

ತುಂಗಭದ್ರಾ ಡ್ಯಾಂ
ತುಂಗಭದ್ರಾ ಡ್ಯಾಂ (ETV Bharat)

By ETV Bharat Karnataka Team

Published : Aug 12, 2024, 1:02 PM IST

ತುಂಗಭದ್ರಾ ಜಲಾಶಯದ ಪರಿಶೀಲನೆ (ETV Bharat)

ಕೊಪ್ಪಳ: ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ 9.65 ಲಕ್ಷ ಎಕರೆ, ಆಂಧ್ರಪ್ರದೇಶದ, ತೆಲಂಗಾಣದ 3.5 ಲಕ್ಷ ಎಕರೆ ಪ್ರದೇಶ ಸೇರಿ ಒಟ್ಟು 12 ಲಕ್ಷ ಎಕರೆ ಪ್ರದೇಶಕ್ಕೆ ನಿರಾವರಿ ಕಲ್ಪಿಸುತ್ತಿದ್ದ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್​ ಗೇಟ್​ ಕಿತ್ತು ಹೋಗಿದೆ. ದುರಸ್ತಿ ಮಾಡಲು ಜಲಾಶಯದ ಅರ್ಧದಷ್ಟು ನೀರು ಹೊರಹಾಕಬೇಕಾಗಿದ್ದು ಜಲಾಶಯ ನಂಬಿದ್ದ ರೈತರಲ್ಲಿ ಈಗ ಆತಂಕ ಮನೆಮಾಡಿದೆ.

ಈ ವರ್ಷ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಪ್ರಯುಕ್ತ ಅವಧಿಗೂ ಮುನ್ನವೇ ಜಲಾಶಯ ಭರ್ತಿಯಾಗಿತ್ತು. ಎರಡು ಬೆಳೆ ಬೆಳೆದುಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿದ್ದ ತ್ರಿವಳಿ ರಾಜ್ಯದ ಅನ್ನದಾತರಿಗೆ ಆಘಾತ ಎದುರಾಗಿದೆ. ಕಳೆದೆರಡು ವರ್ಷಗಳಿಂದ ಸಮರ್ಪಕ ಮಳೆಯಿಲ್ಲದೆ ಜಲಾಶಯ ಭರ್ತಿಯಾಗಿರಲಿಲ್ಲ ಕೇವಲ ಒಂದು ಬೆಳೆ ಬೆಳೆಯಲು ಮಾತ್ರ ಸಾಧ್ಯವಾಗಿತ್ತು. ಆದರೆ ಈ ವರ್ಷ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿದ್ದರೂ 19ನೇ ಕ್ರಸ್ಟ್‌ ಗೇಟ್ ಕಿತ್ತು ಹೋಗಿ ನೀರು ಪೋಲಾಗುತ್ತಿರುವುದು ಈ ಭಾಗದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

1953ರಲ್ಲಿ ಲೋಕಾರ್ಪಣೆ:1945ರ ಫೆಬ್ರುವರಿ 28ರಂದು ಈಗಿನ ಕೊಪ್ಪಳ ಜಿಲ್ಲೆ ಮುನಿರಾಬಾದ್​​ನಲ್ಲಿ ತುಂಗಭದ್ರಾ ಜಲಾಶಯ ನಿರ್ಮಾಣಕ್ಕಾಗಿ ಅಡಿಗಲ್ಲು ಹಾಕಲಾಯಿತು. ಹೈದ್ರಾಬಾದ್ ನಿಜಾಮ ಮತ್ತು ಮದ್ರಾಸ್‌ ಪ್ರಾಂತೀಯ ಸರ್ಕಾರದ ಗವರ್ನರ್​ ಗಿದ್ದ ಸರ್ ಆರ್ಥರ್ ಹೋಪ್ ಈ ಅಣೆಕಟ್ಟು ನಿರ್ಮಾಣಕ್ಕೆ ಕೈ ಜೋಡಿಸಿದ್ದರು. ನಾನಾ ಕಾರಣದಿಂದ ಕಾಮಗಾರಿ ಕುಂಟುತ್ತ ಸಾಗಿತು. ನಂತರ ಸರ್. ಎಂ ವಿಶ್ವೇಶ್ವರಯ್ಯ ನೇತೃತ್ವದ ಎಂಜನಿಯರ್​​ಗಳ ತಂಡ ಪುನಃ ಜಲಾಶಯ ನಿರ್ಮಾಣ ಕಾರ್ಯಕ್ಕೆ ತೊಡಗಿತು. ಆಗ 90 ಗ್ರಾಮಗಳು ಮುಳುಗಡೆಯಾಗಿ, 55 ಸಾವಿರ ಜನರನ್ನು ಸ್ಥಳಾಂತರಿಸಲಾಯಿತು. ಕಾಮಗಾರಿ ಪೂರ್ಣಗೊಂಡು 1953ರಲ್ಲಿ ಜಲಾಶಯ ಲೋಕಾರ್ಪಣೆಗೊಂಡಿತು. ಈ ಜಲಾಶಯ ಒಟ್ಟು 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, 2441 ಮೀ.​ ಉದ್ದ, 49.38 ಮೀ.ಎತ್ತರ ಹೊಂದಿದ್ದು, ಒಟ್ಟು 33 ಕ್ರಷ್ಟ್ ಗೇಟ್​​ಗಳ ಮೂಲಕ ನೀರು ಹರಿಸಬಹುದಾಗಿದೆ. ಅಂದಿನಿಂದ ಇಂದಿನವರೆಗೂ ಮೂರು (ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ) ರಾಜ್ಯಗಳ ರೈತರ ಜೀವನಾಡಿಯಾಗಿ 12 ಲಕ್ಷ ಏಕರೆ ಭೂ ಪ್ರದೇಶದಕ್ಕೆ ನೀರೊದಗಿಸುತ್ತಿದೆ.

ಐದು ವರ್ಷಗಳ ಹಿಂದೆ ಸಂಭವಿಸಿತ್ತೊಂದು ಲಘು ದುರಂತ: 2019 ರಲ್ಲಿ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಯ (ಮುನಿರಾಬಾದ್) ಬಳಿ ಗೇಟ್ ಮುರಿದಿತ್ತು. ಆಗಲೂ ಸಹಿತ ನಾಲ್ಕು ದಿನಗಳ ಕಾಲ ಅಪಾರ ಪ್ರಮಾಣದ ನೀರು ಹರಿದು ಹೋಗಿತ್ತು. ಅಂದು ವಿವಿಧ ತಜ್ಞರ ತಂಡ ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿ, 10 ದಿನಗಳ ಕಾಲ ಸಮಸ್ಯೆ ಬಗೆಹರಿಸಲು ಹರಸಾಹಸ ಪಟ್ಟಿದ್ದರು. ಅದಾದ ಬಳಿಕ 19ನೇ ಗೇಟ್ ಚೈನ್ ಲಿಂಕ್ ಕಟ್ ಆಗಿರುವುದು ಜಲಾಶಯದ ಇತಿಹಾಸದ ಮೊದಲ ಬಹುದೊಡ್ಡ ಪ್ರಕರಣ ಇದಾಗಿದೆ.

60 ಟಿಎಂಸಿ ನೀರು ನದಿಗೆ:ತುಂಗಭದ್ರಾ ಡ್ಯಾಂನಲ್ಲಿ ಸದ್ಯ 100 ಟಿಎಂಸಿ ನೀರು ಸಂಗ್ರಹವಿದೆ. ಆದರೆ 19ನೇ ಗೇಟ್​ಗೆ ಹೊಸ ಗೇಟ್‌ ಅಳವಡಿಕೆ ಮಾಡಬೇಕೆಂದರೆ ಕನಿಷ್ಠ 20 ಅಡಿಯಷ್ಟು ನೀರಿನ ಮಟ್ಟವನ್ನು ಕೆಳಗೆ ಇಳಿಸಬೇಕಾಗಿದೆ. ಅಂದರೆ ಡ್ಯಾಂನಲ್ಲಿ 60 ಟಿಎಂಸಿ ನೀರನ್ನು ನದಿಪಾತ್ರಕ್ಕೆ ಹೊರ ಬಿಡಬೇಕಿದೆ. ಒಟ್ಟು 33 ಕ್ರಷ್ಟಗೇಟ್​ಗಳ ಮೂಲಕ ಪ್ರತಿ ದಿನವು 10 ಟಿಎಂಸಿ ನೀರು ನದಿಪಾತ್ರದಿಂದ ಹೊರಗೆ ಹೋದರೆ ಆರು ದಿನಕ್ಕೆ 60 ಟಿಎಂಸಿ ನೀರು ಡ್ಯಾಂನಿಂದ ಹೊರಗೆ ನೀರು ಹರಿಯಲಿದೆ. ಆರನೇ ದಿನದ ಬಳಿಕ ಹೊಸ ಗೇಟ್‌ ಅಳವಡಿಕೆಯ ಸ್ಥಿತಿಗತಿ ಏನಾಗಿದೆ ಎಂದು ನೋಡಲು ಸಾಧ್ಯವಾಗಲಿದೆ. ಅಂದರೆ ಹೊಸ ಗೇಟ್‌ ಅಳವಡಿಕೆಗೆ ಕನಿಷ್ಠ ಇನ್ನೂ ಆರು ದಿನ ಕಾಯುವ ಪರಿಸ್ಥಿತಿ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

3.5 ಲಕ್ಷ ಕ್ಯೂಸೆಕ್‌ ನೀರು ಬಿಟ್ಟರೆ ಏನೆಲ್ಲ ಅಪಾಯ?:ತುಂಗಭದ್ರಾ ಜಲಾಶಯದಿಂದ ನದಿಪಾತ್ರಕ್ಕೆ ಪ್ರಸ್ತುತ 1 ಲಕ್ಷ ಕ್ಯೂಸೆಕ್‌ ನೀರು ಹರಿಯ ಬಿಡಲಾಗಿದೆ. 2.25 ಲಕ್ಷ ಕ್ಯೂಸೆಕ್‌ ನೀರು ನದಿಗೆ ಹರಿಬಿಟ್ಟರೆ ನದಿಯ ಕೆಳ ಭಾಗದ ಕಾರಟಗಿ ತಾಲೂಕಿನ ಉಳೆಬೆನ್ನೂರು ಸೇರಿ ಇತರ ಗ್ರಾಮಗಳ ಗದ್ದೆಗೆ ನೀರು ನುಗ್ಗುವ ಸಾಧ್ಯತೆ ಇದೆ. ಜೊತೆಗೆ ಆನೆಗೊಂದಿಯ ಸಾಲು ಮಂಟಪ, ಕಂಪ್ಲಿ ಸಂಪೂರ್ಣ ಸೇತುವೆ ಮುಳುಗಡೆಯಾಗುವ ಆತಂಕ ಮೂಡಿದೆ. ಇನ್ನು 3.50 ಲಕ್ಷ ಕ್ಯೂಸೆಕ್‌ ನೀರು ನದಿಪಾತ್ರಕ್ಕೆ ಹರಿಬಿಟ್ಟರೆ ಹಂಪಿಯ ಸ್ಮಾರಕಗಳು ಮತ್ತು ನದಿಪಾತ್ರದ ಋಷಿಮುಖ ಪರ್ವತ, ನವವೃಂದಾವನ ಸೇರಿದಂತೆ ಇತರೆ ಸ್ಮಾರಕಗಳು ಸಂಪೂರ್ಣ ಮುಳುಗಡೆಯಾಗಿ, ಕೆಲವು ಜಮೀನಿಗೆ ನೀರು ನುಗ್ಗುವ ಆತಂಕವಿದೆ.

ನದಿಪಾತ್ರದಲ್ಲಿ ನಿಷೇಧಾಜ್ಞೆ:ಡ್ಯಾಂನ ಒಳ ಹರಿವಿನ ಪ್ರಮಾಣ ಹೆಚ್ಚಿದ್ದು, ನದಿ ಪಾತ್ರದಲ್ಲಿ ನೀರು ರಭಸವಾಗಿ ಹರಿಯುತ್ತಿದೆ. ಹಾಗಾಗಿ ನದಿಪಾತ್ರದ ಬ್ರಿಡ್ಜ್​​, ಬ್ಯಾರೇಜ್​ ಭೋರ್ಗರೆಯುತ್ತಿವೆ. ಈ ವೇಳೆ ನದಿಪಾತ್ರದಲ್ಲಿನ ಹಳ್ಳಿಗಳ ಜನರು ಯಾವುದೇ ಕಾರಣಕ್ಕೂ ನದಿ ತಟದ ನೂರು ಮೀಟರ್ ವ್ಯಾಪ್ತಿಯಲ್ಲಿ ಆ.10ರವರೆಗೂ ಸಂಚಾರ ಮಾಡದಂತೆ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್​ ಅವರು ನಿಷೇಧಾಜ್ಞೆ ಹೊರಡಿಸಿದ್ದಾರೆ.

ಹೊಸ ಗೇಟ್​​ ಅಳವಡಿಕೆ: ಹೊಸ ಗೇಟ್​ ಅಳವಡಿಕೆಗೆ ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತುಂಗಭದ್ರಾ ಮಂಡಳಿಗೆ ಸೂಚನೆ ನೀಡಿದ್ದು, ಬೋರ್ಡ್‌ ಸಹ ಹೊಸಪೇಟೆಯ ನಾರಾಯಣ ಎಂಜಿನಿಯರಿಂಗ್‌ ಕಂಪೆನಿಗೆ ನಿರ್ಮಾಣದ ಹೊಣೆ ನೀಡಿದೆ. ಒಂದು ಗೇಟ್‌ 24 ಅಡಿ ಅಗಲ, 21 ಅಡಿ ಎತ್ತರ ಹಾಗೂ 48 ಟನ್‌ ತೂಕ ಹೊಂದಿದೆ.

ಮುಂಬಯಿ, ಹೈದರಾಬಾದ್‌ ತಜ್ಞರ ಜತೆ ಚರ್ಚೆ:ತುಂಗಭದ್ರಾ ಡ್ಯಾಂ ಗೇಟ್‌ ಮುರಿದ ಬೆನ್ನಲ್ಲೇ ನೀರಾವರಿ ವಿಭಾಗದಲ್ಲಿ ಅತ್ಯಂತ ನುರಿತ ನೀರಾವರಿ ತಜ್ಞರೊಂದಿಗೆ ಟಿಬಿ ಬೋರ್ಡ್‌ ಅಧಿಕಾರಿಗಳು ಚರ್ಚೆ ನಡೆಸಿದ್ದು, ಹೈದರಾಬಾದ್​ ಹಾಗೂ ಮುಂಬೈ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿರುವ ಮಾಹಿತಿ ಲಭ್ಯವಾಗಿದೆ. ಇದಲ್ಲದೇ ಕೆಲವು ಪರಿಣತರನ್ನು ಡ್ಯಾಂನ ಸ್ಥಳಕ್ಕೆ ಕರೆಯಿಸಲಾಗಿದೆ.

ಕ್ರಸ್ಟ್ ಗೇಟ್ ನೋಡಲು ಬರುತ್ತಿರುವ ರೈತರು: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್​ 19 ಕಟ್​ ಆಗಿ ಅಪಾರ ಪ್ರಮಾಣದ ನೀರು ನದಿಗೆ ಹರಿಯುತ್ತಿರುವುದನ್ನು ಮತ್ತು ಜಲಾಶಯದ ಪ್ರಸ್ತುತ ಸನ್ನಿವೇಶ ನೋಡಲು ಕೊಪ್ಪಳ, ವಿಜಯನಗರ, ರಾಯಚೂರು ಸೇರಿದಂತೆ ಅಚ್ಚುಕಟ್ಟು ಪ್ರದೇಶದ ರೈತರು ಮುನಿರಾಬಾದ್​ಗೆ ಬರುತ್ತಿದ್ದು, ಜಲಾಶಯದ ಬಳಿ ಯಾರನ್ನೂ ಬಿಡಿದಂತೆ ಅಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ಪಂಪಾವನದ ಬಳಿ ಬಂದು ನಿರಾಸೆಯಿಂದ ವಾಪಾಸ್ ಹೋಗುತ್ತಿದ್ದಾರೆ‌.

"ಜಲಾಶಯ ಭರ್ತಿಯಾಗಿದೆ ಎಂದು ಖುಷಿಯಾಗಿತ್ತು, ಅದರಂತೆ ಭತ್ತದ ಸಸಿ ನಾಟಿ ಮಾಡಿದ್ದೆವು, ಈಗ ಕ್ರಸ್ಟ್ ಗೇಟ್ ಮುರಿದು ಹೋಗಿದೆ, ಅಪಾರ ಪ್ರಮಾಣದಲ್ಲಿ ನೀರು ನದಿಗೆ ಹರಿದು ಹೋಗುತ್ತಿದೆ‌. ಇದನ್ನು ನೋಡಿ ಮೊದಲ ಬೆಳೆಗಾದರೂ ನೀರು ಬರುತ್ತೋ ಇಲ್ಲವೋ" ಎಂದು ಮುನಿರಾಬಾದ್​ಗೆ ಬಂದಿರುವ ಅಚ್ಚುಕಟ್ಟು ರೈತರು ಅಳಲು ತೋಡಿಕೊಳ್ಳುತ್ತಿರುವ ದೃಶ್ಯ ಕಂಡುಬಂತು.

ಇದನ್ನೂ ಓದಿ:ಟಿಬಿ ಡ್ಯಾಂನಿಂದ ಅಪಾರ ನೀರು ಹೊರಕ್ಕೆ: ಇಂದು ಮಧ್ಯಾಹ್ನ ಭೇಟಿ ನೀಡಲಿರುವ ವಿಪಕ್ಷ ನಾಯಕರು - Tungabhadra dam

ABOUT THE AUTHOR

...view details