ಬೆಂಗಳೂರು: ಕೇಂದ್ರ ಬಜೆಟ್ನಲ್ಲಿ ನಿರೀಕ್ಷಿಸಿದ್ದ ಅನುದಾನ ಘೋಷಣೆಯಾಗದೇ ಇರುವುದರಿಂದ ಕರ್ನಾಟಕಕ್ಕೆ ನಿರಾಸೆಯಾಗಿದೆ. ಆದರೆ, 2025-26ರ ಸಾಲಿನಲ್ಲಿ ರಾಜ್ಯದ ಪಾಲಿನ ಕೇಂದ್ರದ ತೆರಿಗೆ ಹಂಚಿಕೆ ಮೊತ್ತವನ್ನು 51,876 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
ಬಜೆಟ್ನಲ್ಲಿ ರಾಜ್ಯಕ್ಕೆ ಗಮನಾರ್ಹ ಘೋಷಣೆಗಳೇನೂ ಇಲ್ಲ. ರಾಜ್ಯ ಸರ್ಕಾರ ಬೆಂಗಳೂರಿನ 90,000 ಕೋಟಿ ರೂ. ವೆಚ್ಚದ ವಿವಿಧ ಪ್ರಮುಖ ಅಭಿವೃದ್ಧಿ ಯೋಜನೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರದ ಮುಂದಿಟ್ಟಿತ್ತು. ಆದರೆ ಬಜೆಟ್ನಲ್ಲಿ ಈ ಕುರಿತು ಯಾವುದೇ ಪ್ರಸ್ತಾಪಗಳಿಲ್ಲ.
ತೆರಿಗೆ ಹಂಚಿಕೆಯಲ್ಲಿ ಏರಿಕೆ:2024-25ನೇ ಸಾಲಿನಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ 46,932.72 ಕೋಟಿ ರೂ. ತೆರಿಗೆ ಹಂಚಿತ್ತು. ಆದರೆ ಈ ಬಾರಿ 51,876 ಕೋಟಿ ರೂ.ಗೆ ಹೆಚ್ಚಿಸಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.10ರಷ್ಟು ಹೆಚ್ಚಳವಾಗಿದೆ. ಇದು ಆದಾಯ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಸ್ವಲ್ಪ ನಿಟ್ಟುಸಿರು ಬಿಡುವ ವಿಚಾರ. ಈ ಬಾರಿ ತಮಿಳುನಾಡಿಗೆ 58,021.50 ಕೋಟಿ ರೂ., ಆಂಧ್ರ ಪ್ರದೇಶಕ್ಕೆ 57,566.31 ಕೋಟಿ ರೂ. ತೆರಿಗೆ ಹಂಚಲಾಗಿದೆ.
ಬೆಂಗಳೂರು ಉಪನಗರ ರೈಲು ಯೋಜನೆಗೆ ₹350 ಕೋಟಿ:ಬೆಂಗಳೂರು ಉಪನಗರ ರೈಲು ಯೋಜನೆಗೆ ಬಜೆಟ್ನಲ್ಲಿ 350 ಕೋಟಿ ರೂ. ಅನುದಾನ ಘೋಷಣೆಯಾಗಿದೆ. ಸಬ್ ಅರ್ಬನ್ ರೈಲ್ವೆಗೆ ಕಳೆದ ಬಾರಿಯೂ 350 ಕೋಟಿ ನೀಡಲಾಗಿತ್ತು.
ಮೆಟ್ರೋ ಮತ್ತು ಸಾಮೂಹಿಕ ತ್ವರಿತ ಸಂಚಾರಿ ವ್ಯವಸ್ಥೆ ಯೋಜನೆಗಳಿಗೆ 31,106.18 ಕೋಟಿ ರೂ. ಘೋಷಿಸಲಾಗಿದೆ. ಇದರ ಲಾಭ ನಮ್ಮ ಮೆಟ್ರೋಗೂ ಆಗಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ 2.O ನಗರಕ್ಕೆ ಕೇಂದ್ರ ಬಜೆಟ್ನಲ್ಲಿ ಒಟ್ಟು 3,500 ಕೋಟಿ ರೂ. ಘೋಷಿಸಲಾಗಿದೆ. ಇದು ಬೆಂಗಳೂರಲ್ಲೂ ವಸತಿ ಯೋಜನೆಯನ್ನು ಕಲ್ಪಿಸಲಿದೆ. ಇದರ ಜೊತೆಗೆ ದೇಶಾದ್ಯಂತ ಅಮೃತ ಯೋಜನೆಯಡಿ ಒಟ್ಟು 10,000 ಕೋಟಿ ರೂ. ಘೋಷಿಸಲಾಗಿದ್ದು, ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೂ ಇದರಲ್ಲಿ ಗಣನೀಯ ಪಾಲು ಸಿಗುವ ನಿರೀಕ್ಷೆ ಇದೆ.