ಕರ್ನಾಟಕ

karnataka

ETV Bharat / state

ರಾಜಕೀಯ ಗುದ್ದಾಟಕ್ಕೆ ಕಾರಣವಾದ ವಕ್ಫ್ ವಿವಾದ: ರಾಜ್ಯದಲ್ಲಿರುವ ಒಟ್ಟು ವಕ್ಫ್ ಆಸ್ತಿ ಎಷ್ಟು? ಒತ್ತುವರಿಯಾಗಿದ್ದೆಷ್ಟು? - WAQF PROPERTY

ವಕ್ಫ್ ಆಸ್ತಿ ವಿವಾದ ರಾಜ್ಯದಲ್ಲಿ ರಾಜ್ಯಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಹಾಗಿದ್ದರೆ ರಾಜ್ಯದಲ್ಲಿ ವಕ್ಫ್ ಆಸ್ತಿ ಎಷ್ಟಿದೆ, ಒತ್ತುವರಿಯಾಗಿದ್ದೆಷ್ಟು ಎಂಬ ವರದಿ ಇಲ್ಲಿದೆ.

ವಕ್ಫ್ ಆಸ್ತಿ ವಿವಾದ
ವಕ್ಫ್ ಆಸ್ತಿ ವಿವಾದ (ETV Bharat)

By ETV Bharat Karnataka Team

Published : Nov 4, 2024, 9:19 PM IST

ಬೆಂಗಳೂರು: ವಕ್ಫ್ ಆಸ್ತಿ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಷಯ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ರೈತರಿಗೆ ನೋಟಿಸ್ ನೀಡುವ ಮೂಲಕ ವಕ್ಫ್ ಮಂಡಳಿ ಜನರ ಆಕ್ರೋಶಕ್ಕೆ ಗುರಿಯಾಗಿದೆ.

ವಕ್ಫ್ ಆಸ್ತಿ ಒತ್ತುವರಿ ತೆರವು ಪ್ರಕ್ರಿಯೆಯ ಭಾಗವಾಗಿ ವಕ್ಫ್ ಮಂಡಳಿ ರೈತರಿಗೆ ನೋಟಿಸ್ ನೀಡಿರುವುದು ಮತ್ತು ಭೂಮಿ ಪಹಣಿಯಲ್ಲೂ ಹೆಸರು ಬದಲಾಯಿಸಿ, ನೋಟಿಸ್ ನೀಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ‌. ಈಗಾಗಲೇ ಸಿಎಂ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಲು ಸೂಚನೆ ನೀಡಿದ್ದು, ಪಹಣಿಯಲ್ಲಿನ ತಿದ್ದುಪಡಿ ರದ್ದು ಮಾಡುವಂತೆಯೂ ನಿರ್ದೇಶನ ನೀಡಿದ್ದಾರೆ. ಅಷ್ಟಕ್ಕೂ ರಾಜ್ಯದಲ್ಲಿ ರಾಜಕೀಯ ಸಮರಕ್ಕೆ ಕಾರಣವಾದ ವಕ್ಫ್ ಆಸ್ತಿಯ ಸ್ಥಿತಿಗತಿ ಏನಿದೆ ಎಂಬ ವರದಿ ಇಲ್ಲಿದೆ.

ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳೆಷ್ಟು?:ವಕ್ಫ್ ಇಲಾಖೆ ನೀಡಿರುವ ಅಂಕಿ - ಅಂಶದ ಪ್ರಕಾರ ರಾಜ್ಯದಲ್ಲಿ ವಕ್ಫ್ ಮಂಡಳಿಗೆ ಸೇರಿದ ಸುಮಾರು 47,470 ಆಸ್ತಿಗಳಿವೆ. ಅದರಂತೆ ಬೆಂಗಳೂರು ನಗರದಲ್ಲಿ 1,415, ಬೆಂಗಳೂರು ಗ್ರಾಮಾಂತರದಲ್ಲಿ 541, ಚಿಕ್ಕಬಳ್ಳಾಪುರದಲ್ಲಿ 822, ಚಿತ್ರದುರ್ಗದಲ್ಲಿ 535, ದಾವಣಗೆರೆ 730, ಕೋಲಾರ 1025, ರಾಮನಗರ 765, ಶಿವಮೊಗ್ಗ 856, ತುಮಕೂರಲ್ಲಿ 1,155 ವಕ್ಫ್ ಆಸ್ತಿಗಳಿವೆ.

ಇನ್ನು ಬೆಳಗಾವಿಯಲ್ಲಿ 1,232, ಬಾಗಲಕೋಟೆ 1,419, ಚಿಕ್ಕೋಡಿ 1,455, ಧಾರವಾಡ 2,453, ಗದಗ 1,369 ಹಾವೇರಿ 3,235, ಉತ್ತರಕನ್ನಡ 1,503, ವಿಜಯಪುರ 4,134, ಕಲಬುರ್ಗಿ 5,814, ಬಳ್ಳಾರಿ 1,630, ಬೀದರ್ 3,822, ಕೊಪ್ಪಳ 1585, ರಾಯಚೂರು 2,689, ಯಾದಗಿರಿ 1,425, ಮೈಸೂರು 964, ಚಾಮರಾಜನಗರ 339, ಚಿಕ್ಕಮಗಳೂರು 540, ದ.ಕನ್ನಡ 1,782, ಹಾಸನ 580, ಕೊಡಗು 395, ಮಂಡ್ಯ 641 ಮತ್ತು ಉಡುಪಿಯಲ್ಲಿ 620 ವಕ್ಫ್ ಆಸ್ತಿಗಳಿವೆ.

ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳೇನು?:ವಕ್ಫ್ ಇಲಾಖೆ ನೀಡಿರುವ ಮಾಹಿತಿಯಂತೆ ರಾಜ್ಯದಲ್ಲಿ 5,837 ವಕ್ಫ್ ಆಸ್ತಿಗಳು ಒತ್ತುವರಿಯಾಗಿವೆ. ಒಟ್ಟು 16,689 ಎಕರೆ ವಕ್ಫ್ ಆಸ್ತಿಗಳು ಒತ್ತುವರಿಯಾಗಿವೆ. ಡಿಸೆಂಬರ್​​ವರೆಗೆ ಸುಮಾರು 320 ಎಕರೆ ವಕ್ಫ್ ಆಸ್ತಿಯನ್ನು ಒತ್ತುವರಿದಾರರಿಂದ ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ.

ವಕ್ಫ್ ಇಲಾಖೆ ನೀಡಿದ ಅಂಕಿ - ಅಂಶದಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 159 ಎಕರೆ, ಬೆಂಗಳೂರು ಗ್ರಾಮಾಂತರದಲ್ಲಿ ಸುಮಾರು 3 ಎಕರೆ, ಚಿಕ್ಕಬಳ್ಳಾಪುರದಲ್ಲಿ ಸುಮಾರು 95 ಎಕರೆ ಆಸ್ತಿ ಒತ್ತುವರಿಯಾಗಿದೆ. ಇನ್ನು ಕೋಲಾರದಲ್ಲಿ 32 ಎಕರೆ, ರಾಮನಗರ 23 ಎಕರೆ, ಶಿವಮೊಗ್ಗ 34 ಎಕರೆ ಮತ್ತು ತುಮಕೂರು 24 ಎಕರೆ, ಬೆಳಗಾವಿ ಸುಮಾರು 452 ಎಕರೆ, ಬಾಗಲಕೋಟೆ 1,264 ಎಕರೆ, ಧಾರವಾಡ 30 ಎಕರೆ, ಹಾವೇರಿ 167 ಎಕರೆ, ಉತ್ತರ ಕನ್ನಡ 50 ಎಕರೆ ಹಾಗೂ ವಿಜಯಪುರದಲ್ಲಿ 6,438 ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿದೆ ಎಂದು ಮಾಹಿತಿ ನೀಡಿದೆ.

ಕಲಬುರ್ಗಿಯಲ್ಲಿ 3,027 ಎಕರೆ, ಬಳ್ಳಾರಿ 657 ಎಕರೆ, ಬೀದರ್ 1,355 ಎಕರೆ, ಕೊಪ್ಪಳ 48 ಎಕರೆ, ರಾಯಚೂರು 423 ಎಕರೆ, ಯಾದಗಿರಿ 2,080 ಎಕರೆ, ಮೈಸೂರು 29 ಎಕರೆ, ಚಾಮರಾಜನಗರ 182 ಎಕರೆ, ಚಿಕ್ಕಮಗಳೂರು 6 ಎಕರೆ, ಕೊಡಗು 22 ಎಕರೆ, ಮಂಡ್ಯ 9 ಎಕರೆ ವಕ್ಫ್ ಆಸ್ತಿ ಒತ್ತುವರಿಯಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ವಕ್ಫ್ ಆಸ್ತಿ ಒತ್ತುವರಿಯಾಗಿಲ್ಲ ಎಂದು ಮಾಹಿತಿ ನೀಡಿದೆ.

ಒತ್ತುವರಿದಾರರ ಮೇಲೆ ದಾಖಲಾದ ಪ್ರಕರಣ ಏನು?:ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಅತಿಕ್ರಮಣ ಮಾಡಿರುವವರ ಮೇಲೆ ಜೂನ್ ವರೆಗೆ ವಕ್ಫ್ ಕಾಯ್ದೆ ಕಲಂ 52ರಂತೆ ಸುಮಾರು 808 ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ 472 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಕ್ರಮ ವಹಿಸಲಾಗಿದೆ. ಕಲಂ 52 ಅಂದರೆ ವಕ್ಫ್ ಆಸ್ತಿಯನ್ನು ವಕ್ಫ್ ಮಂಡಳಿ ಅನುಮತಿ ಇಲ್ಲದೇ ವರ್ಗಾವಣೆಯಾಗಿರುವುದಾಗಿದೆ. ಇದರಡಿ ದಾಖಲಾದ ಪ್ರಕರಣಗಳಲ್ಲಿ 30 ದಿನದೊಳಗೆ ವಕ್ಫ್ ಆಸ್ತಿಯನ್ನು ವಕ್ಫ್ ಮಂಡಳಿಗೆ ಹಿಂತಿರುಗಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡುತ್ತಾರೆ.

ವಕ್ಫ್ ಕಾಯ್ದೆ ಕಲಂ 54ರಂತೆ ರಾಜ್ಯದಲ್ಲಿ ಜೂನ್ ವರೆಗೆ 4,017 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 1877 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ಕ್ರಮ ವಹಿಸಲಾಗಿದೆ. ಕಲಂ 54ರಡಿ ವಕ್ಫ್ ಆಸ್ತಿ ಮೇಲಿನ ಒತ್ತುವರಿಯನ್ನು ತೆರವು ಮಾಡುವುದಾಗಿದೆ. ಸಿಇಒ ಒತ್ತುವರಿದಾರರಿಗೆ ನೋಟಿಸ್ ನೀಡಿ, ಪರಿಶೀಲನೆ ನಡೆಸಿ ಬಳಿಕ ಒತ್ತುವರಿಯನ್ನು ತೆರವು ಮಾಡಲಾಗುತ್ತದೆ ಎಂದು ವಕ್ಫ್ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ವಕ್ಫ್​ ಬೋರ್ಡ್​ ವಿವಾದ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ, ದಾವಣಗೆರೆ - ಶಿವಮೊಗ್ಗದಲ್ಲಿ ಮುಖಂಡರು ವಶಕ್ಕೆ

ABOUT THE AUTHOR

...view details