ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಅಥವಾ ಎಂಎಸ್‌ಪಿಯನ್ನು ಕೇಂದ್ರ ಸರ್ಕಾರವು 1966-67ರಲ್ಲಿ ಪರಿಚಯಿಸಿತು. ಸ್ವಾತಂತ್ರ್ಯದ ಸಮಯದಲ್ಲಿ ಭಾರತವು ಏಕದಳ ಉತ್ಪಾದನೆಯಲ್ಲಿ ದೊಡ್ಡ ಕೊರತೆಯನ್ನು ಎದುರಿಸಿದ ನಂತರ ಕಡಿಮೆ ಉತ್ಪಾದನೆಯು ಜನಸಂಖ್ಯೆಯ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಒಂದು ದಶಕಕ್ಕೂ ಹೆಚ್ಚು ಕಾಲ ಹೋರಾಡಿದ ನಂತರ, ಭಾರತ ಸರ್ಕಾರವು ಅಂತಿಮವಾಗಿ ವ್ಯಾಪಕವಾದ ಕೃಷಿ ಸುಧಾರಣೆಗಳಿಗೆ ಹೋಗಲು ನಿರ್ಧರಿಸಿತು. ಈ ಕೃಷಿ ಸುಧಾರಣೆಯ ಮೊದಲ ಹೆಜ್ಜೆಯಾಗಿ, ಕನಿಷ್ಠ ಬೆಂಬಲ ಬೆಲೆ ಅಥವಾ ಎಂಎಸ್‌ಪಿ ಅನ್ನು ಪರಿಚಯಿಸಲಾಯಿತು.
ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಎಂದರೇನು?: ಎಂಎಸ್ಪಿಯು ಬೆಲೆ ಕುಸಿತದ ಸಂದರ್ಭದಲ್ಲಿ ರೈತರಿಗೆ ಸುರಕ್ಷತಾ ಜಾಲವನ್ನು ಒದಗಿಸಲು ಸರ್ಕಾರವು ಕೈಗೊಂಡ ಮಾರುಕಟ್ಟೆ ಹಸ್ತಕ್ಷೇಪದ ಒಂದು ರೂಪವಾಗಿದೆ. ಇದು ಬೆಳೆಗಳಿಗೆ ಒಂದು ಬೆಲೆಯಾಗಿದ್ದು, ಸರ್ಕಾರವು ರೈತರಿಗೆ ಎಲ್ಲಾ ವೆಚ್ಚದಲ್ಲಿ ಮತ್ತು ಎಲ್ಲಾ ಸಂದರ್ಭಗಳಲ್ಲೂ ಖಾತರಿ ನೀಡುತ್ತದೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಎಂಬುದು ಕೃಷಿ ಉತ್ಪನ್ನದ ಬೆಲೆಯಲ್ಲಿ ಯಾವುದೇ ತೀವ್ರತರಹದ ಕುಸಿತ ಉಂಟಾದಾಗ ಕೃಷಿ ಉತ್ಪಾದಕರ ಸಹಾಯಕ್ಕೆ ಧಾವಿಸುವ ಒಂದು ರೂಪವಾಗಿದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ ಕೆಲವು ಬೆಳೆಗಳಿಗೆ ಬಿತ್ತನೆ ಕಾಲದ ಆರಂಭದಲ್ಲಿ ಭಾರತ ಸರ್ಕಾರವು ಕನಿಷ್ಠ ಬೆಂಬಲ ಬೆಲೆಗಳನ್ನು ಘೋಷಿಸುತ್ತದೆ.
1960ರ ದಶಕದಲ್ಲಿ ಭಾರತವು ಅನೇಕ ವರ್ಷಗಳ ಬರಗಾಲದಿಂದಾಗಿ ಆಹಾರದ ಕೊರತೆಯನ್ನು ಎದುರಿಸಿದ ಸಂದರ್ಭದಲ್ಲಿ, ಆಹಾರದ ಮೀಸಲು ದಾಸ್ತಾನುಗಳನ್ನು ಕಾಪಾಡಿಕೊಳ್ಳಲು, ಘೋಷಿಸುವ ಮೂಲಕ ರೈತರಿಗೆ ಬೆಂಬಲ ಬೆಲೆಯನ್ನು ಒದಗಿಸಲು, ವಿವಿಧ ಸರಕುಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಸಂಗ್ರಹಿಸಲು ಮತ್ತು ಧಾನ್ಯವನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ನೀತಿಗಳನ್ನು ವಿನ್ಯಾಸಗೊಳಿಸಲಾಗಿದೆ.
ಉತ್ಪಾದನೆ ಭಾರಿ ಹೆಚ್ಚಳವಾದ ವರ್ಷಗಳಲ್ಲಿ ಅತಿಯಾದ ಬೆಲೆ ಕುಸಿತದ ವಿರುದ್ಧ ಉತ್ಪಾದಕ ರೈತರನ್ನು ರಕ್ಷಿಸಲು ಎಂಎಸ್‌ಪಿ ಬೆಲೆಯನ್ನು ಭಾರತ ಸರ್ಕಾರ ನಿಗದಿಪಡಿಸುತ್ತದೆ. ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರವು 2024-25ನೇ ಸಾಲಿಗೆ ಭತ್ತ, ರಾಗಿ, ಜೋಳ, ತೊಗರಿ, ಬೇಳೆ ಸೇರಿ 14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಹೆಚ್ಚಿಸಲು ತೀರ್ಮಾನಿಸಿದೆ.
ಪ್ರಧಾನಿಯಾಗಿ 3ನೇ ಬಾರಿಗೆ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ 2ನೇ ಬಾರಿಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ತೊಗರಿ ಬೇಳೆಗೆ 550 ರೂ. ಬೆಂಬಲ ಬೆಲೆ ಹೆಚ್ಚಿಸಲಾಗಿದ್ದು, ಒಟ್ಟು ಬೆಂಬಲ ಬೆಲೆ 7,550 ರೂ.ಗೆ ಏರಿಕೆಯಾಗಿದೆ. ಸಾಮಾನ್ಯ ಭತ್ತದ ಎಂಎಸ್‌ಪಿ 117 ರೂ. ಏರಿಕೆಯೊಂದಿಗೆ ಪ್ರತೀ ಕ್ವಿಂಟಾಲ್‌ಗೆ 2,300 ರೂ.ಗಳಾದರೆ, ಎ ಗ್ರೇಡ್ ಭತ್ತದ ಎಂಎಸ್‌ಪಿ ಹೆಚ್ಚಳದಿಂದಾಗಿ 2,320 ರೂ.ಗೆ ಏರಿಕೆಯಾಗಿದೆ.