ಕೆಇಎ ಪರೀಕ್ಷೆಗೆ ಶೇ.34ರಷ್ಟು ಅಭ್ಯರ್ಥಿಗಳು ಹಾಜರು (ETV Bharat) ಬೆಂಗಳೂರು:ಬಿಎಂಟಿಸಿ, ಕೆಕೆಆರ್ಟಿಸಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿವಿಧ ಹುದ್ದೆಗಳಿಗೆ ಶನಿವಾರ ನಡೆದ ಪರೀಕ್ಷೆಗೆ ಶೇ 34.5ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು.
ಬೆಂಗಳೂರು, ಕಲಬುರಗಿ, ಧಾರವಾಡ ಮತ್ತು ಬಳ್ಳಾರಿಯ ಒಟ್ಟು 22 ಕೇಂದ್ರಗಳ 377 ಕೊಠಡಿಗಳಲ್ಲಿ ನಡೆದ ಪರೀಕ್ಷೆಗೆ ಈ ಬಾರಿ ವೆಬ್ ಕಾಸ್ಟಿಂಗ್ ಮಾಡುವುದರ ಮೂಲಕ ಕ್ಯಾಮರಾ ಕಣ್ಗಾವಲು ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷೆಗೆ ಒಟ್ಟು 8,526 ಮಂದಿ ಅರ್ಜಿ ಸಲ್ಲಿಸಿದ್ದು, 2,905 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಸಚಿವರಿಂದ ತರಾಟೆ: ಪರೀಕ್ಷಾ ವ್ಯವಸ್ಥೆಯ ವೆಬ್ ಕಾಸ್ಟಿಂಗ್ನ್ನು ಇಲ್ಲಿನ ಕಾಮಂಡ್ ಸೆಂಟರ್ನಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು ವೀಕ್ಷಿಸಿದರು. ಈ ಸಂದರ್ಭದಲ್ಲಿ ಧಾರವಾಡ ಕೇಂದ್ರದ ಪರೀಕ್ಷಾ ಮೇಲ್ವಿಚಾರಕರೊಬ್ಬರು ಅಭ್ಯರ್ಥಿಯ ಸಹಿಯನ್ನು ಅವರ ಪಕ್ಕದಲ್ಲಿ ಕುಳಿತು ಹಾಕಿಸಿಕೊಂಡಿದ್ದನ್ನು ನೋಡಿ ಸಚಿವರು ಗರಂ ಆದರು.
ನಂತರ ಹಾಟ್ಲೈನ್ನಲ್ಲಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರಕ್ಕೆ ಕರೆ ಮಾಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಆ ರೀತಿ ಪಕ್ಕದಲ್ಲಿ ಕುಳಿತು ಸಹಿ ಮಾಡಿಸಿಕೊಳ್ಳುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದರು. ಪರೀಕ್ಷಾ ಅಕ್ರಮ ತಡೆಯಲು ಈ ವೆಬ್ ಕಾಸ್ಟಿಂಗ್ ವ್ಯವಸ್ಥೆ ಸೂಕ್ತವಾಗಿದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ:20 ಸಾವಿರ ಅಂಗನವಾಡಿಗಳು 'ಗವರ್ನಮೆಂಟ್ ಮಾಂಟೆಸ್ಸರಿ' ಆಗಿ ಪರಿವರ್ತನೆ: ಲಕ್ಷ್ಮೀ ಹೆಬ್ಬಾಳ್ಕರ್ - Government Montessori