ಕರ್ನಾಟಕ

karnataka

ETV Bharat / state

'ನಮ್ಮ ಭೂಮಿ, ನಮ್ಮ ಹಕ್ಕು' ಹೆಸರಲ್ಲಿ ಪ್ರಧಾನಿ ಮೋದಿ, ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರಿಗೆ ಪತ್ರ: ಆರ್. ಅಶೋಕ್ - R ASHOK

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಮತ್ತು ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಸಿಎಂ ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು.

ಆರ್.ಅಶೋಕ್
ಆರ್.ಅಶೋಕ್ (ETV Bharat)

By ETV Bharat Karnataka Team

Published : Nov 2, 2024, 4:49 PM IST

ಬೆಂಗಳೂರು: ನಮ್ಮ ಭೂಮಿ, ನಮ್ಮ ಹಕ್ಕು ಹೆಸರಿನಲ್ಲಿ ಪ್ರಧಾನಿ ಮೋದಿ ಮತ್ತು ವಕ್ಫ್ ಮಸೂದೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕ ಪಾಲ್ ಅವರಿಗೆ ಪತ್ರ ಬರೆಯುತ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕರ್ನಾಟಕಕ್ಕೆ ಭೇಟಿ ಕೊಟ್ಟು ಪರಿಶೀಲಿಸುವಂತೆ ವಕ್ಫ್ ಮಸೂದೆ ಮೇಲಿನ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕ ಪಾಲ್​​ಗೆ ಪತ್ರ ಬರೆಯುತ್ತಿದ್ದೇನೆ. ರಾಜ್ಯದಲ್ಲಿ ವಕ್ಫ್ ಮೂಲಕ ರೈತರ ಜಮೀನು ಕಬಳಿಸುವ ಸಂಚು ನಡೆಯುತ್ತಿದ್ದು, ಮೋದಿಯವರಿಗೂ ಪತ್ರ ಬರೆಯುತ್ತೇವೆ ಎಂದರು.

ಸಚಿವ ಜಮೀರ್ ಅವರೇ ಸಿಎಂ ನಿರ್ದೇಶನದ ಮೇರೆಗೆ ನೋಟಿಸ್ ಕೊಟ್ಟಿರೋದಾಗಿ ಹೇಳಿದ್ದಾರೆ. ಒಂದು ಬಾಯಲ್ಲಿ ನೋಟಿಸ್ ಕೊಡಲು ಹೇಳಿ ಇನ್ನೊಂದು ಬಾಯಲ್ಲಿ ವಾಪಸ್ ಪಡೆಯಲು ಹೇಳಿದ್ದೀವಿ ಅಂದಿದ್ದಾರೆ. ಈಗ ಸಿಎಂ ಮಾತನ್ನ ನಂಬಬೇಕೋ? ಜಮೀರ್ ಮಾತನ್ನು ನಂಬಬೇಕೋ?. ನಾಡಿದ್ದು ರಾಜ್ಯಾದ್ಯಂತ ಡಿಸಿ, ತಹಶೀಲ್ದಾರ್ ಕಚೇರಿಗಳ ಎದುರು ಪ್ರತಿಭಟನೆ ಮತ್ತು ಮುತ್ತಿಗೆ ಹೋರಾಟ ಮಾಡ್ತೇವೆ. ದಲಿತರ ಹಣ ನುಂಗಿದ್ರು, ಈಗ ರೈತರ ಜಮೀನುಗಳಿಗೆ ಕಣ್ಣು ಹಾಕಿದ್ದಾರೆ. ವಕ್ಫ್ ಬೋರ್ಡ್ ಹೆಸರಲ್ಲಿ ಜಮೀನು ಲೂಟಿ ಮಾಡ್ತಿದ್ದಾರೆ. ಲ್ಯಾಂಡ್ ಜಿಹಾದ್ ರಾಜ್ಯದಲ್ಲಿ ನಡೀತಿದೆ. 16 ತಿಂಗಳಲ್ಲಿ ಇವರ ಪಕ್ಷ ಲೂಟಿ ಕಾಂಗ್ರೆಸ್ ಆಗಿದೆ. ಲೂಟಿ ಲೂಟಿ ಲೂಟಿ ಎಲ್ಲೆಲ್ಲೂ ಲೂಟಿ ಎಂದು ಅಶೋಕ್​ ವಾಗ್ದಾಳಿ ನಡೆಸಿದರು.

ಮೋದಿಯವರನ್ನು ಟೀಕಿಸುವ ನೈತಿಕತೆ ಇಲ್ಲ:ಗ್ಯಾರಂಟಿಗಳು ಅವೈಜ್ಞಾನಿಕವಾಗಿವೆ. ಖರ್ಗೆಯವರೇ ಬಜೆಟ್ ನೋಡಿಕೊಂಡು ಗ್ಯಾರಂಟಿ ಘೋಷಿಸಬೇಕಿತ್ತು ಅಂದಿದ್ದಾರೆ. ಮಹಾರಾಷ್ಟ್ರದವರಿಗೂ ಹುಚ್ಚರ ಥರ ಐದಾರು ಗ್ಯಾರಂಟಿ ಘೋಷಿಸಬೇಡಿ ಅಂದಿದ್ದೇನೆ ಅಂತ ಖರ್ಗೆ ಹೇಳಿದ್ದಾರೆ. ಅಂದ್ರೆ ಕರ್ನಾಟಕದ ಕಾಂಗ್ರೆಸ್​​ನವರು ಹುಚ್ಚರು ಅಂತ ಆಯ್ತಲ್ಲ. ಖರ್ಗೆಯವರು ಹೇಳಿದ್ದನ್ನು ಮೋದಿಯವರು ಟ್ವೀಟ್​​ನಲ್ಲಿ ಹೇಳಿದ್ದಾರೆ ಅಷ್ಟೇ. ಹೆಣ ಮುಚ್ಚಲೂ ಕಾಂಗ್ರೆಸ್ ಬಳಿ ಹಣ ಇಲ್ಲ. ಸಿದ್ದರಾಮಯ್ಯನವರು ಗ್ಯಾರಂಟಿಗಳನ್ನು ನಿಲ್ಲಿಸಲ್ಲ ಅಂತ ಸಾವಿರ ಬಾರಿ ಹೇಳಿದ್ದಾರೆ. ಸಾವಿರ ಬಾರಿ ಹೇಳುವ ಅಗತ್ಯ ಏನಿದೆ?. ಡಿಕೆಶಿ, ರಾಯರೆಡ್ಡಿ, ಬಿ.ಆರ್. ಪಾಟೀಲ್, ದೇಶಪಾಂಡೆ ಸೇರಿ ಹಲವರು ಮಾತಾಡಿದ್ದಾರೆ. ಗ್ಯಾರಂಟಿ ನಿಲ್ಲಿಸದಿದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಅವರ ಶಾಸಕರೇ ಹೇಳಿದ್ದಾರೆ ಎಂದು ಪ್ರತಿಪಕ್ಷ ನಾಯಕ ಕಿಡಿಕಾರಿದರು.

ಬೆಂಗಳೂರಿನಲ್ಲಿ ಗುಂಡಿ ಮುಕ್ತ ಇರುವ ಒಂದೇ ಒಂದು ರಸ್ತೆ ತೋರಿಸಿ, ನಿಮಗೆ ನೊಬೆಲ್ ಪ್ರಶಸ್ತಿ ಕೊಡಿಸ್ತೇವೆ. ಇದು ನಮ್ಮ ಸವಾಲು. ಪ್ರತಿ ತಿಂಗಳು ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ಸೂಚನೆ ಕೊಟ್ಟಿದೆ ಅಂತ ನಮಗೆ ಮಾಹಿತಿ ಬಂದಿದೆ. ಕರ್ನಾಟಕ ಬಿಜೆಪಿ ಸರ್ಕಾರ 40% ಸರ್ಕಾರ ಅಂತಾ ಸಿಎಂ ಆರೋಪಿಸಿದ್ದರು. 40% ಆರೋಪಕ್ಕೆ ಸಂಬಂಧಿಸಿದಂತೆ ಯಾವ ದಾಖಲೆ ಇದೆ ನಿಮ್ಮ ಬಳಿ?. ಯಾವ ದಾಖಲೆ ಕೋರ್ಟಿಗೆ ಸಲ್ಲಿಸಿದ್ದೀರಿ?. ನಿಮ್ಮ ಸರ್ಕಾರ 75% ಕಮೀಷನ್ ಸರ್ಕಾರ. ಸುಮ್ನೆ ನಮ್ಮ ಮೇಲೆ ಅನಾವಶ್ಯಕ ಆರೋಪ ಮಾಡಬೇಡಿ. ಮುಡಾದಲ್ಲಿ ತಪ್ಪು ಮಾಡಿಲ್ಲ ಅಂದ್ರಿ, ಸೈಟು ಯಾಕೆ ವಾಪಸ್ ಕೊಟ್ರಿ?. ವಾಲ್ಮೀಕಿ ನಿಗಮದ ಹಣ ವಾಪಸ್ ತಂದ್ರಾ?. ಹಗರಣಗಳಲ್ಲಿ ಬಿದ್ದು ಒದ್ದಾಡ್ತಿರುವ ಸಿದ್ದರಾಮಯ್ಯಗೆ ಮೋದಿಯವರನ್ನು ಟೀಕಿಸುವ ಮತ್ತು ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ. ದೊಡ್ಡ ವ್ಯಕ್ತಿ ಬಗ್ಗೆ ಮಾತಾಡಿದರೆ ಕಿರೀಟ ಬರುತ್ತೆ ಅನ್ಕೊಂಡಿದ್ದೀರಾ?. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಮೊದಲು ಅದನ್ನು ನೋಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಗ್ಯಾರಂಟಿ ವಿಚಾರದಲ್ಲಿ ಬಿಜೆಪಿಯವರು ಮನೆ ಮುರಿಯುವ ಕೆಲಸ ಮಾಡುತ್ತಿದ್ದಾರೆ ಎಂಬ ಡಿಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ಮನವಿ ಯಾರು ಕೊಟ್ಟರು? ಇವರಿಗೆ ಕನಸಿನಲ್ಲಿ ಮನವಿ ಬಂತಾ? ವಾಟ್ಸಪ್​​ನಲ್ಲಿ ಬಂತಾ?. ಮನವಿ ಬಂದಿದ್ದರೆ ಯಾಕೆ ತೋರಿಸಲಿಲ್ಲ ಇವರು?. ಗ್ಯಾಸ್ ಸಬ್ಸಿಡಿ ಕೊಡುವಾಗ ಮೋದಿ ಇವರ ತರಹ ನಿನಗೂ ಫ್ರೀ, ನಿನಗೂ ಫ್ರೀ ಅಂತಾ ಡೈಲಾಗ್ ಹೇಳಿದ್ರಾ? ಎಂದು ಟೀಕಿಸಿದರು.

ಕಾಂಗ್ರೆಸ್​​ನವರಿಗೆ ಹೃದಯ ಇಲ್ಲ:ಚನ್ನಪಟ್ಟಣದಲ್ಲಿ ಕಣ್ಣೀರ ಪಾಲಿಟಿಕ್ಸ್ ವಿಚಾರವಾಗಿ ಪ್ರತಿಕ್ರಿಯಿಸಿ, ಹೆಚ್​ಡಿಕೆ ಮತ್ತು ನಿಖಿಲ್ ಪ್ರಾಮಾಣಿಕವಾಗಿ ಕಣ್ಣೀರಿನ ಮೂಲಕ‌ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಹೃದಯ ಇಲ್ಲದವರಿಗೆ, ಲೂಟಿಕೋರರಿಗೆ ಕಣ್ಣೀರು ಬರಲ್ಲ. ಕಾಂಗ್ರೆಸ್​​ನವರಿಗೆ ಹೃದಯ ಇಲ್ಲ. ಅವರು ರಕ್ತ ಹರಿಸೋರು, ಅವರಿಗೆ ಕಣ್ಣೀರು ಎಲ್ಲಿ ಬರುತ್ತೆ?. ಒಂದು ಕಣ್ಣೀರಿಗೆ ಕಾಂಗ್ರೆಸ್​ನವರು ಹೆದರಿ ಹೋಗಿದ್ದಾರೆ. ಒಂದು ಕಣ್ಣೀರಿಗೆ ಇವರು ಹೆದರಿದರೆ ಇನ್ನು ದೇವೇಗೌಡರು ಬಂದರೆ ಏನು ಕಥೆ. ನಾವು ಈಗ ಚನ್ನಪಟ್ಟಣದಲ್ಲಿ ಓಪನಿಂಗ್ ಬ್ಯಾಟ್ಸ್‌ಮನ್ ಮಾತ್ರ ಕಳಿಸಿದ್ದೇವೆ. ಇನ್ನು ದ್ರಾವಿಡ್, ಕೊಹ್ಲಿ ಎಲ್ಲರೂ ಇರ್ತಾರೆ, ಆಗ ಕಾಂಗ್ರೆಸ್​ನವರು​​ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ರೈತರಿಗೆ ನೀಡಿದ ನೋಟಿಸ್ ತಕ್ಷಣ ವಾಪಸ್ ಪಡೆಯಿರಿ, ಪಹಣಿ ತಿದ್ದುಪಡಿ ರದ್ದು ಮಾಡಿ: ಸಿಎಂ ಖಡಕ್ ಸೂಚನೆ

ABOUT THE AUTHOR

...view details