ಬೆಂಗಳೂರು: ''ನಿಖಿಲ್ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಅಭ್ಯರ್ಥಿಯನ್ನಾಗಿ ಘೋಷಿಸಿದ್ದೇವೆ. ಪ್ರಧಾನಿ ಮೋದಿ ಆಶೀರ್ವಾದ ಇದೆ, ಮೋದಿ ಪಕ್ಷದಿಂದ ಬೆಂಬಲವಿದೆ. ಎಲ್ಲ ಮುಖಂಡರು ಒಟ್ಟಾಗಿ ಸೇರಿದ್ದೇವೆ. ಚುನಾವಣೆಯಲ್ಲಿ ಗೆದ್ದು ನಂತರ ನಿಮ್ಮನ್ನು ಭೇಟಿಯಾಗಲಿದ್ದೇವೆ'' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.
ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಿಎಂ ಯಡಿಯೂರಪ್ಪ ನಿವಾಸ ಧವಳಗಿರಿಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಸಮನ್ವಯ ಸಭೆ ನಡೆಯಿತು. ಈ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಕುರಿತು ಸಮಾಲೋಚನೆ ನಡೆಸಲಾಯಿತು. ಅಂತಿಮವಾಗಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು ಎನ್ನುವ ನಿರ್ಣಯವನ್ನು ಸರ್ವಾನುಮತದಿಂದ ಕೈಗೊಳ್ಳಲಾಯಿತು.
ಸಭೆ ನಂತರ ಮಾತನಾಡಿದ ಯಡಿಯೂರಪ್ಪ, ''ನಿಖಿಲ್ ಗೆಲುವು ಖಚಿತ, ಈ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಬಿಜೆಪಿ ಜೆಡಿಎಸ್ನ ಎಲ್ಲ ಪ್ರಮುಖರು ಒಟ್ಟಾಗಿ ಪ್ರವಾಸ ಮಾಡುತ್ತೇವೆ. ಪಕ್ಷಾಂತರ ಮಾಡಿರುವವರ ಬಗ್ಗೆ, ಬೇರೆಯವರ ಬಗ್ಗೆ ಮಾತನಾಡಲ್ಲ. ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ, ನಾವೆಲ್ಲಾ ನಿಖಿಲ್ಗೆ ಬೆಂಬಲಿಸುತ್ತೇವೆ. ದೊಡ್ಡ ಅಂತರ ಗೆಲುವು ಪಡೆಯುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ''ಯಡಿಯೂರಪ್ಪ ಆಶೀರ್ವಾದದೊಂದಿಗೆ ಅಶೋಕ್, ನಾನು ಸೇರಿ ನಮ್ಮೆಲ್ಲಾ ನಾಯಕರು ಸೇರಿ ನಿರ್ಧಾರ ಮಾಡಿದ್ದೇವೆ. ಇಂದು ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರ ಒತ್ತಡ ಹಾಗೂ ಎರಡು, ಮೂರು ದಿನಗಳ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಎರಡೂ ಪಕ್ಷಗಳ ಮುಖಂಡರು ಸೇರಿ ಯಡಿಯೂರಪ್ಪ ಸಮ್ಮುಖದಲ್ಲಿ ನಿಖಿಲ್ ಹೆಸರು ಘೋಷಿಸಿದ್ದೇವೆ'' ಎಂದರು.
ನಮ್ಮಲ್ಲಿ ಗೊಂದಲ ಇರಲಿಲ್ಲ: ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಷಯ ಕುರಿತು ಮಾತನಾಡಿದ ಅವರು, ''ಕಳೆದ ಒಂದೂವರೆ ತಿಂಗಳಿನಿಂದ ನಡೆದ ಬೆಳವಣಿಗೆ, ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಇದು ಅಪ್ರಸ್ತುತ, ಈ ಸಂದರ್ಭದಲ್ಲಿ ನಾವು, ಬಿಜೆಪಿಯ ಎಲ್ಲ ನಾಯಕರೂ ನಿರ್ಧರಿಸಿದ್ದೇವೆ. ನಮ್ಮ ರಾಜ್ಯ ಘಟಕದ ಎಲ್ಲ ನಾಯಕರು, ಹಲವರು ನನ್ನ ಜೊತೆ ಚರ್ಚಿಸಿದ್ದಾರೆ. ಪ್ರಲ್ಹಾದ್ ಜೋಶಿ ನಿವಾಸದಲ್ಲಿಯೂ ಹಲವಾರು ಬಾರಿ ಸಭೆ ನಡೆಸಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇರಲಿಲ್ಲ. ಮುಕ್ತವಾದ ಅವಕಾಶವಿತ್ತು, ಅವರು ಬೇರೆ ಬೇರೆ ತೀರ್ಮಾನ ಮಾಡಿಕೊಂಡಿರುವುದರಿಂದ ಆ ಬಗ್ಗೆ ಚರ್ಚೆ ಬೇಡ. ನಮ್ಮ ಅಭ್ಯರ್ಥಿ ಗೆಲ್ಲುವ ಕಡೆಯಷ್ಟೇ ನಮ್ಮ ನಿರ್ಧಾರ'' ಎಂದು ಹೆಚ್ಡಿಕೆ ತಿಳಿಸಿದರು.