ಬೆಂಗಳೂರು: ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಪರವಾಗಿ ನಿರ್ಣಯ ತೆಗೆದುಕೊಂಡಿದ್ದೇವೆ. ಸಾಮಾಜಿಕ ನ್ಯಾಯ ಸುಮ್ ಸುಮ್ನೆ ಬರೋದಿಲ್ಲ. ಇಂಥಾ ತೀರ್ಮಾನ ಮಾಡಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.
ಒಳಮೀಸಲಾತಿ ಕುರಿತ ಸಚಿವ ಸಂಪುಟ ನಿರ್ಣಯಕ್ಕಾಗಿ ತಮ್ಮನ್ನು ಅಭಿನಂದಿಸಿದ ಮಾದಿಗ ಸಮುದಾಯದ ರಾಜ್ಯ ಮುಖಂಡರು, ಪ್ರತಿಷ್ಠಿತರು, ಒಳಮೀಸಲಾತಿ ಹೋರಾಟದ ನಾಯಕರು, ಪದಾಧಿಕಾರಿಗಳು ಮತ್ತು ಸಮುದಾಯದ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಒಳಮೀಸಲಾತಿಗಾಗಿ ಮಾದಿಗ ಸಮುದಾಯ ದಶಕಗಳಿಂದ ಹೋರಾಟ ನಡೆಸಿದೆ. ಈಗ ಸುಪ್ರೀಂಕೋರ್ಟ್ ಕೂಡ ತೀರ್ಪು ನೀಡಿದೆ. ನಾವು ಜಾರಿ ಮಾಡಲೇಬೇಕಿದೆ. 101 ಪರಿಶಿಷ್ಟ ಜಾತಿಗಳಿವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ. ಎಲ್ಲರನ್ನೂ ಸಮಾಧಾನ ಮಾಡುವುದು ಸಾಧ್ಯವಿಲ್ಲದಿದ್ದರೂ ಶೇ. 90 ರಷ್ಟು ಸಮುದಾಯಗಳಿಗೆ ಸಮಾಧಾನ ಆಗುವ ತೀರ್ಮಾನ ತೆಗೆದುಕೊಳ್ಳಬೇಕಿದೆ. ಇದನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.
ಗೃಹ ಸಚಿವ ಪರಮೇಶ್ವರ್ ಅವರ ನಿವಾಸದಲ್ಲಿ ನಡೆದ ದಲಿತ ಶಾಸಕರ ಸಭೆಯಲ್ಲಿ, "ಒಳ ಮೀಸಲಾತಿಗೆ ತಮ್ಮ ವಿರೋಧ ಇಲ್ಲ" ಎನ್ನುವ ನಿರ್ಣಯ ಮಾಡಿದ್ದಾಗಿದೆ. ಹೀಗಾಗಿ ಎಲ್ಲರೂ ಒಳಮೀಸಲಾತಿ ಪರವಾಗಿದ್ದಾರೆ. ತೆಲಂಗಾಣ ಸರ್ಕಾರ ಈಗಾಗಲೇ ಒಳಮೀಸಲಾತಿ ಜಾರಿ ಸಂಬಂಧ ಒಂದು ಆಯೋಗ ರಚನೆ ಮಾಡಿದ್ದಾಗಿದೆ. ನಾನು ತೆಲಂಗಾಣ ಸಿಎಂ ಜೊತೆಗೂ ಇತ್ತೀಚಿಗೆ ಮೈಸೂರಿನಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಹರಿಯಾಣದಲ್ಲೂ ಕ್ಯಾಬಿನೆಟ್ ನಿರ್ಣಯ ಆಗಿದೆ. ಆದರೆ, ಆದೇಶ ಆಗಿಲ್ಲ. ನಮ್ಮ ಕ್ಯಾಬಿನೆಟ್ನಲ್ಲೂ ಹಿಂದೊಮ್ಮೆ ಅನೌಪಚಾರಿಕ ಚರ್ಚೆ ಮಾಡಿದ್ದೆ. ನೆನ್ನೆಯ ಕ್ಯಾಬಿನೆಟ್ನಲ್ಲಿ ಸಚಿವ ಮಹದೇವಪ್ಪ ಒಳಮೀಸಲಾತಿ ವಿಚಾರ ಪ್ರಸ್ತಾಪಿಸಿದರು. ಸಚಿವರಾದ ಪ್ರಿಯಾಂಕ್ ಖರ್ಗೆ, ತಿಮ್ಮಾಪುರ, ಮುನಿಯಪ್ಪ ಅವರು ಎಲ್ಲರೂ ಮಾತನಾಡಿದರು. ಎಲ್ಲರೂ ಒಳ ಮೀಸಲಾತಿಗೆ ಒಪ್ಪಿಕೊಂಡರು. ಯಾರದ್ದೂ ವಿರೋಧ ಇರಲಿಲ್ಲ. ಆದರೆ, ಅಗತ್ಯ ಡಾಟಾ ಅಗತ್ಯವಿದೆ ಎನ್ನುವ ಸಂಗತಿ ಕೂಡ ಚರ್ಚೆಗೆ ಬಂದಿದೆ. ಹೀಗಾಗಿ ಆಯೋಗ ರಚನೆ ಮಾಡಿದ್ದೇವೆ. ಆಯೋಗ ಎಲ್ಲ ವರದಿಗಳನ್ನೂ ಅಧ್ಯಯನ ಮಾಡಿ ಅಗತ್ಯ ಅಂಕಿ ಅಂಶ ಸಮೇತ ವರದಿ ನೀಡುತ್ತದೆ. ವರದಿ ಬರುವವರೆಗೂ ಹೊಸದಾಗಿ ಯಾವ ನೇಮಕಾತಿ ನೋಟಿಫಿಕೇಶನ್ ಹೊರಡಿಸುವುದು ಬೇಡ ಎನ್ನುವ ನಿರ್ಣಯ ಆಗಿದೆ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದರು.