ವೇತನ ತಾರತಮ್ಯ ಸರಿಪಡಿಸಲು ಕಾನೂನು ತಿದ್ದುಪಡಿ: ಸಚಿವ ಮಧು ಬಂಗಾರಪ್ಪ ಬೆಂಗಳೂರು: "ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ಪಡೆದ ಉಪನ್ಯಾಸಕರಾಗಿರುವ ಹಿರಿಯ ಮತ್ತು ಕಿರಿಯ ಸರ್ಕಾರಿ ನೌಕರರ ವೇತನದಲ್ಲಿನ ತಾರತಮ್ಯವನ್ನು ನಿವಾರಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ವೇತನ ಹೆಚ್ಚಳ ನಿಯಮಗಳು/ಆದೇಶಗಳಿಗೆ ಆದಷ್ಟು ಬೇಗ ತಿದ್ದುಪಡಿ ತಂದು ವೇತನ ತಾರತಮ್ಯ ಸರಿಪಡಿಸಲಾಗುತ್ತದೆ" ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನ ಪರಿಷತ್ ಕಲಾಪದಲ್ಲಿ ಇಂದು ನಿಯಮ 330ರ ಅಡಿ ಮರಿತಿಬ್ಬೇಗೌಡ, ಬೋಜೇಗೌಡ, ಬಿಜೆಪಿ ಸದಸ್ಯ ಎಸ್.ವಿ.ಸಂಕನೂರ್ ಚರ್ಚೆಗೆ ಉತ್ತರಿಸಿದ ಸಚಿವರು, "ಬಡ್ತಿ ಪಡೆದ ಹಿರಿಯರು ಮತ್ತು ಪ್ರಸ್ತುತ ಇರುವ ಕಿರಿಯರ ನಡುವೆ ವೇತನ ತಾರತಮ್ಯ ಇರುವುದು ನನ್ನ ಗಮನಕ್ಕೆ ಬಂದಿದೆ. ಸಮಸ್ಯೆ ಇದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ. ಇದನ್ನು ಸರಿಪಡಿಸಲು ಕಾನೂನು ತಿದ್ದುಪಡಿ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ನಮ್ಮ ಸಹಮತವಿದೆ. ಕಾಲಮಿತಿಯಲ್ಲಿ ತಿದ್ದುಪಡಿ ಮಾಡಬೇಕಾಗಿದೆ. ಆರ್ಥಿಕ ಹೊರೆ ಎಂದ ಮಾತ್ರಕ್ಕೆ ಎಲ್ಲವನ್ನೂ ಅಧಿಕಾರಿಗಳಿಗೆ ಬಿಡಲ್ಲ, ತಾರತಮ್ಯ ಸರಿಪಡಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತದೆ" ಎಂದರು.
"ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಬಡ್ತಿ ಹೊಂದಿದ ಶಿಕ್ಷಕರು ಪ್ರೌಢಶಾಲೆಯಲ್ಲಿ ತಮಗಿಂತ ಕಿರಿಯ ಶಿಕ್ಷಕ ಪಡೆಯುವ ವೇತನಕ್ಕೂ ಕಡಿಮೆ ವೇತನ ಪಡೆಯುತ್ತಿದ್ದಾರೆ. ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ಪಡೆದು ಉಪನ್ಯಾಸಕರಾಗಿರುವ ಹಿರಿಯರು ಕಿರಿಯ ಉಪನ್ಯಾಸಕರಿಗಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ. ಬಡ್ತಿ ಪಡೆಯದೇ ಇರುವ ಶಿಕ್ಷಕ, ಉಪನ್ಯಾಸಕರಿಗಿಂತ ಕಡಿಮೆ ಇಲ್ಲದಂತೆ ವೇತನ ನಿಗದಿ ಬೇಡಿಕೆ, ಕಾಲಮಿತಿ ಬಡ್ತಿ ಬೇಡಿಕೆ ಇದೆ. ಅದರಂತೆ ಶಿಕ್ಷಕರ ವೇತನ ವ್ಯತ್ಯಾಸ, ಬಡ್ತಿಯಲ್ಲಿನ ವೇತನ ಅಸಮಾನತೆ ಸರಿಪಡಿಸಲಾಗುತ್ತದೆ. ಇದಕ್ಕೆ ಕಾನೂನು ತಿದ್ದುಪಡಿ ಮಾಡೋಣ. ಶಾಶ್ವತ ಸಮಸ್ಯೆ ಪರಿಹಾರ ಮಾಡಲಾಗುತ್ತದೆ" ಎಂದು ಭರವಸೆ ಕೊಟ್ಟರು.
"ವೇತನ ಸರಿಪಡಿಸುವ ಕುರಿತು ಆರನೇ ವೇತನ ಆಯೋಗದ ವೇತನವನ್ನು ಅರ್ಥಿಕ ಇಲಾಖೆ ತಿರಸ್ಕರಿಸಿದೆ. ಹಾಗಾಗಿ ಕಾನೂನು ತಿದ್ದುಪಡಿ ಮಾಡಬೇಕಿದೆ. ಇಲ್ಲಿ ಸಮಸ್ಯೆ ಇದೆ ಸರಿಪಡಿಸಲಾಗುತ್ತದೆ. ಶಿಕ್ಷಕರ ಕ್ಷೇತ್ರದ ಸದಸ್ಯರ ಸಭೆ ನಡೆಸಿ ಅವರ ಸಲಹೆ ಪಡೆದು ಎರಡು ಮೂರ ದಿನದಲ್ಲೇ ಈ ಪ್ರಯತ್ನ ಆರಂಭಿಸಲಾಗುತ್ತದೆ. ಸಿಎಂಗೂ ಇದು ಅರ್ಥವಾಗಿದೆ. ಅವರ ಗಮನಕ್ಕೆ ತಂದು ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಕಾನೂನು ತಿದ್ದುಪಡಿಯನ್ನು ಮತ್ತಷ್ಟು ವಿಳಂಬ ಮಾಡಲು ನನಗೆ ಇಷ್ಟವಿಲ್ಲ. ಆದಷ್ಟು ಬೇಗ ಬಡ್ತಿ ಪಡೆದ ಶಿಕ್ಷಕರು ಮತ್ತು ಉಪನ್ಯಾಸಕರ ಸಮಸ್ಯೆ ಪರಿಹಾರ ಮಾಡಲಾಗುತ್ತದೆ" ಎಂದರು.
ಇದನ್ನೂ ಓದಿ:ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಸಲು ಪಕ್ಷಭೇದ ಮರೆತು ಶಾಸಕರ ಒತ್ತಾಯ