ಹಾಸನ: ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿದ್ದ ಇಬ್ಬರ ಮೇಲೆ ಕೆಲ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹೊರವಲಯದ ಮೈಸೂರು ರಸ್ತೆಯ ಡಾಬಾ ಬಳಿ ಘಟನೆ ಶುಕ್ರವಾರ ನಡೆದಿದೆ. ಹಾಡುಹಗಲೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಶುಕ್ರವಾರ ಸಂಜೆ 5 ಗಂಟೆಯ ಸುಮಾರಿಗೆ ದುಷ್ಕರ್ಮಿಗಳ ಗುಂಪು ಹಾಗೂ ಕಾಳೇನಹಳ್ಳಿ ಕಾರ್ತಿಕ್, ಪುನೀತ್ ನಡುವೆ ಗಲಾಟೆ ನಡೆದಿದೆ. ಜಗಳ ತಾರಕ್ಕೇರಿದಾಗ, ಕೈ-ಕೈ ಮಿಲಾಯಿಸಿದ್ದಾರೆ. ಬಳಿಕ ತಾವು ತಂದಿದ್ದ ಮಾರಕಾಸ್ತ್ರಗಳಿಂದ ಎರಡು ತಂಡಗಳು ಬಡಿದಾಡಿಕೊಂಡಿವೆ. ಕೊನೆಗೆ ಜಗಳ ನಡೆಯುತ್ತಿದ್ದ ಸಂದರ್ಭದಲ್ಲಿ ಡಾಬಾ ಪಕ್ಕದಿಂದ ಮಾರಕಾಸ್ತ್ರ ಹಿಡಿದು ಓಡಿ ಬಂದ ದುಷ್ಕರ್ಮಿಗಳು ಮಚ್ಚಿನಿಂದ ಕಾರ್ತಿಕ್ಗೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.
ಘಟನೆಯಲ್ಲಿ ಕಾರ್ತಿಕ್ ಕೈಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ಪ್ರಾಣಾಪಾಯದಿಂದ ಕೂದಲೆಳೆಯಲ್ಲಿ ಪಾರಾದ ಪುನೀತ್ಗೂ ಗಾಯಗಳಾಗಿದೆ. ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕಾರ್ತಿಕ್ ಹಾಗೂ ಪುನೀತ್ ಇತ್ತೀಚೆಗಷ್ಟೆ ಜೈಲಿನಿಂದ ಬೇಲ್ ಮೇಲೆ ಹೊರಬಂದಿದ್ದರು. ನಿನ್ನೆ ಸಂಜೆ ಖಾಸಗಿ ಡಾಬಾದಲ್ಲಿ ಉಪಹಾರ ಮಾಡಿ ಹೊರ ಬಂದು ಮಾತನಾಡುವ ವೇಳೆ ದುಷ್ಕರ್ಮಿಗಳ ಗುಂಪಿನ ಜೊತೆಗೆ ಮಾತಿಗೆ ಮಾತು ಬೆಳೆದು ಬಡಿದಾಡಿಕೊಂಡಿದ್ದಾರೆ.
ಮಾರಕಾಸ್ತ್ರಗಳಿಂದ ಹಲ್ಲೆ ಮತ್ತು ಬಡಿದಾಡಿಕೊಂಡ ದೃಶ್ಯಗಳು ಡಾಬಾದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಶೀಘ್ರದಲ್ಲಿ ದುಷ್ಕರ್ಮಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯುವತಿ ವಿಚಾರ: ಮಾಜಿ ಪ್ರಿಯಕರನ ಮೇಲೆ ಮಾರಣಾಂತಿಕ ಹಲ್ಲೆ, ಹಾಲಿ ಪ್ರಿಯಕರನ ಬಂಧನ