ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆ ಮುಂದೂಡುವ ಬಗ್ಗೆ ಕೆಇಎ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಗೃಹ ಸಚಿವ ಪರಮೇಶ್ವರ ತಿಳಿಸಿದರು.
ಸದಾಶಿವನಗರದ ಸಚಿವರ ಗೃಹ ಕಚೇರಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಶಾಸಕ ಧೀರಜ್ ಮುನಿರಾಜ್ ನೇತೃತ್ವದ ನಿಯೋಗದಿಂದ ಮನವಿ ಪತ್ರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 402 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯ ಹೊಣೆಯನ್ನು ಕೆಇಎಗೆ ವಹಿಸಲಾಗಿದೆ. ಸೆ.22ರಂದು ಪರೀಕ್ಷೆ ನಡೆಸಲು ನಿಗದಿ ಮಾಡಿದ್ದಾರೆ. ಪಿಎಸ್‌ಐ ಪರೀಕ್ಷೆ ಬರೆಯಬೇಕಾದ 100ಕ್ಕೂ ಹೆಚ್ಚು ಆಕಾಂಕ್ಷಿಗಳು, ಯುಪಿಎಸ್‌ಸಿ ಮುಖ್ಯಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಹೀಗಾಗಿ ಪರೀಕ್ಷಾ ದಿನ ಮುಂದೂಡುವಂತೆ ಮನವಿ ಸಲ್ಲಿಸಿದ್ದಾರೆ. ಪರೀಕ್ಷೆ ಮುಂದೂಡುವ ಕುರಿತ ಸಾಧಕ - ಬಾಧಕಗಳನ್ನು ಇಲಾಖೆಯ ಅಧಿಕಾರಿಗಳು ಹಾಗೂ ಕೆಇಎ ಅವರೊಂದಿಗೆ ಮತ್ತೊಮ್ಮೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.
ನಮಗೆ ಯುಪಿಎಸ್‌ಸಿ ಮುಖ್ಯವಲ್ಲ. ಇಲಾಖೆಯಲ್ಲಿ ಸಾವಿರ ಪಿಎಸ್ಐ ಹುದ್ದೆಗಳು ಖಾಲಿ ಇವೆ. ಈ ಹಿನ್ನೆಲೆಯಲ್ಲಿ ನಿಯಮ 32 ಅಡಿ ಎಎಸ್‌ಐಗಳಿಗೆ ಪಿಎಸ್ಐ ಹುದ್ದೆಗೆ ಬಡ್ತಿ ನೀಡಲಾಗಿದೆ. ಬೀದಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸಬೇಕಾದ ಪಿಎಸ್ಐ ಇಲ್ಲವಾದರೆ, ಇಲಾಖೆ ಮುನ್ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.
ಬಿಜೆಪಿ ಆಡಳಿತದ ಅವಧಿಯಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮವಾದ ಬಳಿಕ ನೇಮಕಾತಿ ನಡೆದಿಲ್ಲ. ಎಲ್ಲ ಗೊಂದಲದ ನಡುವೆಯೂ ಕೋರ್ಟ್‌ನಿಂದ ಅನುಮತಿ ಪಡೆದು ಮರುಪರೀಕ್ಷೆ ನಡೆಸಲಾಗಿದೆ. ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವ ಹಂತದಲ್ಲಿದೆ. ಈ ನಡುವೆಯೇ ಮತ್ತೆ ಕೆಲವರು ಕೋರ್ಟ್‌ಗೆ ಹೋಗಿದ್ದು, ಅಂತಿಮಪಟ್ಟಿ ಪ್ರಕಟಿಸಲು ವಿಳಂಬವಾಗುತ್ತಿದೆ ಎಂದು ತಿಳಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಪಿಎಸ್ಐ ನೇಮಕಾತಿ ನಡೆದಿಲ್ಲ. ಸಿಂಧುತ್ವ, ದಾಖಲಾತಿ ಪರಿಶೀಲನೆ, ತರಬೇತಿ ಪಡೆದು ಇಲಾಖೆಗೆ ಸೇರಲು ಒಂದು ವರ್ಷ ಬೇಕಾಗುತ್ತದೆ. ಎರಡು ವರ್ಷ ಪ್ರೊಬೆಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ, 402 ಪಿಎಸ್‌ಐ ಹುದ್ದೆಗಳಿಗೆ ಆದಷ್ಟು ಬೇಗ ಪರೀಕ್ಷೆ ನಡೆಸಲು ಮುಂದಾಗಿದ್ದೇವೆ. ಇದಾದ ನಂತರ 600 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಗೂ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.