ಮೈಸೂರು:"ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆ ಪಕ್ಷಕ್ಕೆ ಹೊರೆಯಾಗಿದೆ ಎಂದು ಖುದ್ದು ಕೆಪಿಸಿಸಿ ಅಧ್ಯಕ್ಷರು ಹೇಳಿದರು. ಕೆಪಿಸಿಸಿ ಅಧ್ಯಕ್ಷರು ಪಕ್ಷದ ಶಿಸ್ತುಪಾಲನಾ ಸಮಿತಿಗೆ ವರದಿ ಕೊಟ್ಟರೆ ಅದರ ಅಧ್ಯಕ್ಷ ರಹೀಂ ಖಾನ್ ಕ್ರಮ ಕೈಗೊಳ್ಳಬಹುದು. ನಾನು ಈ ಹಿಂದೆ ಎಐಸಿಸಿ ಶಿಸ್ತು ಪಾಲನಾ ಸಮಿತಿ ಸದಸ್ಯನಾಗಿದ್ದೆ. ಆಗ ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ಕೊಡುವ ನಾಯಕರನ್ನು ಅವರು ಎಷ್ಟೇ ದೊಡ್ಡವರಿದ್ದರೂ ನೋಟಿಸ್ ಕೊಟ್ಟು ಕರೆಸುತ್ತಿದ್ದೆವು. ಅಗತ್ಯವಿದ್ದರೆ ಸಸ್ಪೆಂಡ್ ಕೂಡ ಮಾಡುತ್ತಿದ್ದೆವು. ಈಗಲೂ ಕೆಪಿಸಿಸಿ ಅಧ್ಯಕ್ಷರು ಶಿಸ್ತು ಪಾಲನಾ ಸಮಿತಿ ಗಮನಕ್ಕೆ ಈ ವಿಚಾರವನ್ನು ತರಬಹುದು. ಜಮೀರ್ ಹೇಳಿಕೆ ಚುನಾವಣೆಯ ಮೇಲೆ ಸ್ವಲ್ಪ ಪರಿಣಾಮ ಬೀರುತ್ತಿದೆ ಎಂದು ಪಕ್ಷದ ನಾಯಕರೇ ಹೇಳಿದ್ದಾರೆ" ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯ ಪ್ರಚಾರದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಅಹ್ಮದ್ ಖಾನ್ ಕರಿಯ ಎಂದು ಸಂಬೋಧಿಸಿದ್ದರು. ಈ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದಂತೆ ಅವರು ಕ್ಷಮೆಯಾಚಿಸಿದ್ದರು.
"ಸಿಎಂ ಬದಲಾವಣೆ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಚರ್ಚೆ ಆಗಿಲ್ಲ. ಹೀಗಿದ್ದರೂ ಬಿಜೆಪಿ ಹಾಗೂ ಜೆಡಿಎಸ್‌ನವರು ಈ ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ಮೈಸೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ (ETV Bharat) ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಸಿಎಂ ಬದಲಾವಣೆ ಆಗುತ್ತದೆ ಎಂದು ಬಿಜೆಪಿ, ಜೆಡಿಎಸ್‌ನವರು ಹೇಳುತ್ತಿದ್ದಾರೆಯೇ ಹೊರತು ಈ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಚರ್ಚೆ ಆಗಿಲ್ಲ" ಎಂದರು.
"ಸಿಎಂ ಅವರನ್ನು ಕಂಡರೆ ಬಿಜೆಪಿ ಅವರಿಗೆ ಹೊಟ್ಟೆ ಉರಿ. ಹೀಗಾಗಿ ಅವರೇ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಇಳಿಸಲು ಡೇಟ್ ಫಿಕ್ಸ್ ಮಾಡುತ್ತಾರೆ" ಎಂದರು.
ತಮ್ಮ ಪರ ಜನ ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, "ಅದು ಸಹಜ ಅಲ್ಲವೇ. ಅವರ ವಿರುದ್ಧ ಸುಮ್ಮನೆ ಆರೋಪ ಮಾಡುತ್ತಾರೆ ಎಂದರೆ ಜನ ಏನು ಮಾಡುತ್ತಾರೆ ಹೇಳಿ?. ಅದರಲ್ಲೂ ಮೈಸೂರಿನ ಜನ ಏನು ಮಾಡುತ್ತಾರೆ ಹೇಳಿ?. ಅದನ್ನು ಮುಖ್ಯಮಂತ್ರಿಗಳು ಹೇಳಿದ್ದಾರೆ" ಎಂದು ಸಮರ್ಥಿಸಿಕೊಂಡರು.
40% ಕಮಿಷನ್ ಪ್ರಕರಣ: "ನಾವು ಕೆಂಪಣ್ಣ ಆಯೋಗ ಬರೆದ ಪತ್ರದ ಮೇಲೆ ಹೋರಾಟ ಮಾಡಿದ್ದೆವು. ನಮಗೆ ಅದೇ ದಾಖಲೆ. ಈಗ ಲೋಕಾಯುಕ್ತದವರು ಯಾವ ಆಧಾರದ ಮೇಲೆ ಸಾಕ್ಷಿ ಇಲ್ಲ ಎನ್ನುತ್ತಿದ್ದಾರೆ ಎಂಬುದನ್ನು ನೋಡಬೇಕಿದೆ. ಅಗತ್ಯಬಿದ್ದರೆ ಮರುತನಿಖೆಗೆ ಒಳಪಡಿಸಲು ನಾವು ಸಿದ್ಧ" ಎಂದರು.
ಶಾಸಕರ ಖರೀದಿ ಆರೋಪ: "ಶಾಸಕರ ಖರೀದಿಗೆ ಬಿಜೆಪಿ ಈಗಲೂ ಪ್ರಯತ್ನ ಮಾಡುತ್ತಿದೆ. ಆದರೆ ಎಷ್ಟು ಕೋಟಿ ಎಂಬುದು ಗೊತ್ತಿಲ್ಲ. ಪ್ರಯತ್ನವನ್ನಂತೂ ಮಾಡುತ್ತಲೇ ಇರುತ್ತಾರೆ. ಮುಖ್ಯಮಂತ್ರಿಗಳೇ ಕೋಟಿ ವಿಚಾರ ಹೇಳಿದ ಮೇಲೆ ಅದು ಸತ್ಯ ಇರಬಹುದು. ಈ ವಿಚಾರವಾಗಿ ಸರಿಯಾದ ದಾಖಲೆ ಸಿಕ್ಕರೆ ಅದರ ಬಗ್ಗೆಯೂ ತನಿಖೆ ಮಾಡುತ್ತೇವೆ. ಬಿಜೆಪಿಯವರು ಆಪರೇಷನ್ ಕಮಲ ಮಾಡುವುದರಲ್ಲಿ ಎತ್ತಿದ ಕೈ" ಎಂದು ಟೀಕಿಸಿದರು.
ಬೆಂಗಳೂರಿನಲ್ಲಿ ಡ್ರಗ್ಸ್ ಹಾವಳಿ:ಬೆಂಗಳೂರಿನಲ್ಲಿ ಚಾಕೊಲೇಟ್ ರೂಪದಲ್ಲಿ ಡ್ರಗ್ಸ್ ಸಿಗುತ್ತಿರುವ ಕುರಿತ ಪ್ರಶ್ನೆಗೆ, "ಡ್ರಗ್ಸ್ ವಿರುದ್ಧ ಕ್ರಮಕ್ಕೆ ಸರ್ಕಾರ ಸಮರ ಸಾರಿದೆ. ಎಲ್ಲೆಡೆ ಕಡಿವಾಣ ಹಾಕಲು ತೀರ್ಮಾನ ಮಾಡಲಾಗಿದೆ. ಶಾಲಾ, ಕಾಲೇಜುಗಳ ಬಳಿ ಡ್ರಗ್ಸ್ ಚಾಕೊಲೇಟ್ ರೂಪದಲ್ಲಿ ಮಾರಾಟವಾಗುತ್ತಿವೆ ಎಂಬ ಮಾಹಿತಿ ಬಂದರೆ ಕೂಡಲೇ ಮೆಡಿಕಲ್ ಶಾಪ್ಗಳ ಲೈಸನ್ಸ್ ರದ್ದು ಮಾಡಲು ಕ್ರಮ ವಹಿಸಲಾಗುವುದು. ಆನೇಕಲ್ ಭಾಗದಲ್ಲಿ ಪೊಲೀಸರು ಹೆಚ್ಚು ದಾಳಿ ಮಾಡುತ್ತಿದ್ದಾರೆ. ಬೇರೆ ರಾಜ್ಯದಿಂದ ಡ್ರಗ್ಸ್ ಬರುತ್ತಿದ್ದುದನ್ನು ಪೊಲೀಸರು ಹಿಡಿದಿದ್ದಾರೆ. ಹೊರ ದೇಶದಿಂದ ಬಂದು ಡ್ರಗ್ಸ್ ಮಾರಾಟ ಮಾಡುವವರ ಮಾಹಿತಿಯನ್ನು ಹೈ ಕಮಿಷನ್ ಹಾಗೂ ರಾಯಭಾರಿಗಳಿಗೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಏರ್‌ಪೋರ್ಟ್ ಡ್ರಗ್ಸ್ ಮೂಲಕ ಸಿಕ್ಕಾಪಟ್ಟೆ ಬರುತ್ತಿದೆ. ವಿಶಾಖಪಟ್ಟಣದಲ್ಲಿ ಒಂದೂವರೆ ಸಾವಿರ ಕೆ.ಜಿ ಡ್ರಗ್ಸ್ ಹಿಡಿದಿದ್ದಾರೆ" ಎಂದು ಸಚಿವ ಪರಮೇಶ್ವರ್ ಮಾಹಿತಿ ನೀಡಿದರು.
ಇದನ್ನೂ ಓದಿ:ರಾಜ್ಯ ಸರ್ಕಾರ ಅಚಾನಕ್ಕಾಗಿ ಕಾರ್ಡ್ಗಳನ್ನ ಯಾಕೆ ರದ್ದುಮಾಡುತ್ತಿದೆ ಎಂಬುದು ಗೊತ್ತಿಲ್ಲ - ಪ್ರಲ್ಹಾದ್ ಜೋಶಿ