ಬೆಂಗಳೂರು:''ಒಗ್ಗಟ್ಟು ಪ್ರದರ್ಶಿಸಲು ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ'' ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಮತ ಚಲಾವಣೆ ಬಳಿಕ ಮಾತನಾಡಿದ ಅವರು, ''ನಮ್ಮ ಶಾಸಕರಿಗೆ ಅಮಿಷವೊಡ್ಡುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಒಂದು ಸಂದೇಶ ಕೊಡಲು ಅಭ್ಯರ್ಥಿ ಹಾಕಿದ್ದೇವೆ. ನಾವೆಲ್ಲ ಒಟ್ಟಿಗೆ ಇದ್ದೇವೆ. ಯಾರಿಗೂ ಅಸಮಾಧಾನ ಇಲ್ಲ. ಕೆಲವು ಭಿನ್ನಾಭಿಪ್ರಾಯಗಳು ಇರಬಹುದು ಅಷ್ಟೇ. ಆದ್ರೆ ನಾವೆಲ್ಲ ಒಟ್ಟಿಗೆ ಇದ್ದೇವೆ'' ಎಂದರು.
ಎಸ್. ಟಿ. ಸೋಮಶೇಖರ್ ಅಭಿವೃದ್ಧಿಗಾಗಿ ನಮ್ಮ ಮತ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ''ಬಿಜೆಪಿ ಸರ್ಕಾರದಲ್ಲಿ ಮೂರು ವರ್ಷ ಮಂತ್ರಿಯಾಗಿದ್ದಾರೆ. ಬಿಜೆಪಿಗೆ ಹೋಗಬೇಕಾದರೆ ಕಾರಣ ಕೊಟ್ಟಿದ್ದರು. ಅಭಿವೃದ್ಧಿ ಆಗ್ತಿಲ್ಲ ಅಂತ ಹೋಗಿದ್ದರು. ಮೂರು ವರ್ಷ ಮಂತ್ರಿ ಆಗಿ ಎಲ್ಲ ಪಡೆದುಕೊಂಡ್ರು. ಅವರು ಮಾತ್ರ ಅಭಿವೃದ್ಧಿ ಮಾಡಿಕೊಂಡ್ರು. ಕ್ಷೇತ್ರದ ಅಭಿವೃದ್ಧಿಯೇನಾಗಿಲ್ಲ'' ಎಂದು ಹೆಚ್ಡಿಕೆ ಆರೋಪಿಸಿದರು.
''ನಮ್ಮ ಶಾಸಕರು ನಿಷ್ಠೆಯಿಂದ ಇದ್ದಾರೆ. 19 ಶಾಸಕರು ನಮ್ಮ ಜೊತೆ ಇದ್ದಾರೆ. ಸೋಲು ಗೆಲುವು ಮುಖ್ಯವಲ್ಲ. ಶಿಕ್ಷಕರ ಕ್ಷೇತ್ರದ ಚುನಾವಣೆ ನೀವೇ ನೋಡಿದ್ದೀರಿ. ಬೆಳ್ಳಿ ಕಪ್ ಕೊಟ್ಟು ಮತ ಪಡೆದ್ರು. ನಮ್ಮ ಶಾಸಕರನ್ನು ಒಡೆಯೋಕೆ ಹೊರಟಿದ್ದರು. ಶರಣಗೌಡ, ಕರೆಮ್ಮ ಜಿ. ನಾಯಕ ಹೋಗ್ತಾರೆ ಅಂತ ಹೇಳ್ತಿದ್ರು. ನಾವು 19 ಜನ ಒಟ್ಟಾಗಿದ್ದೇವೆಂಬ ಸಂದೇಶ ರವಾನಿಸಿದ್ದೇವೆ'' ಎಂದರು.