ಶಿವಮೊಗ್ಗ: ನಮಗೆ ದೇಶದ ವಿಷನ್ ಚಿಂತೆಯಾದರೆ ವಿರೋಧ ಪಕ್ಷಗಳಿಗೆ ಕಮಿಷನ್ ಚಿಂತೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಹೇಳಿದರು. ಶಿವಮೊಗ್ಗ ಹೊರವಲಯ ಸಾಗರ ರಸ್ತೆಯಲ್ಲಿರುವ ಪ್ರೇರಣಾ ಕನ್ವೆನ್‌ಷನ್ ಹಾಲ್‌ನಲ್ಲಿ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ವೃತ್ತಿಪರರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಿಜೆಪಿ ಮತ್ತು ಮೈತ್ರಿ ಪಕ್ಷದ ಕೂಟಗಳಿಗೆ ದೇಶದ ಬಗ್ಗೆ ದೂರದೃಷ್ಟಿಯ ಚಿಂತೆ ಹಾಗೂ ಚಿಂತನೆ ಇದೆ. ಆದರೆ, ವಿರೋಧ ಪಕ್ಷಗಳಿಗೆ ಇದ್ಯಾವುದೂ ಇಲ್ಲ. ಅವರಿಗೆ ಕೇವಲ ಕಮಿಷನ್ ಚಿಂತೆ ಇದೆ ಎಂದು ಆರೋಪಿಸಿದರು.
ಬಿಜೆಪಿ ಇಡೀ ದೇಶವನ್ನು ಅಖಂಡ ಭಾರತವಾಗಿ ನಿರ್ಮಿಸುತ್ತಿದೆ. ಆದರೆ, ಇಂಡಿಯಾ ಒಕ್ಕೂಟ ದೇಶವನ್ನು ಇಬ್ಭಾಗ ಮಾಡುತ್ತಿದೆ. ತೆರಿಗೆಯ ವಿಷಯದಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂದು ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಕಳೆದ 10 ವರ್ಷಗಳಿಂದೆಚೆಗೆ ರಾಷ್ಟ್ರವನ್ನು ವಿಶ್ವದ ಮುಂಚೂಣಿ ದೇಶಗಳ ಸಾಲಿಗೆ ತಂದಿದ್ದಾರೆ. ಉಜ್ವಲ ಯೋಜನೆ ಜಾರಿಯಿಂದ ಗ್ರಾಮೀಣ ಭಾಗದ ತಾಯಂದಿರು ಗ್ಯಾಸ್ ಸಂಪರ್ಕವನ್ನು ಪಡೆಯುವ ಮೂಲಕ ಉತ್ತಮ ಜೀವನವನ್ನು ಸಾಗಿಸುತ್ತಿದ್ದಾರೆ. 12 ಕೋಟಿ ಶೌಚಾಲಯವನ್ನು ನಿರ್ಮಿಸಿಕೊಡುವ ಮೂಲಕ ಕೇಂದ್ರವು ಗ್ರಾಮೀಣ ಭಾಗದ ಮಹಿಳೆಯರು ಗೌರವಯುತವಾದ ಜೀವನ ನಿರ್ವಹಿಸುವಂತೆ ಮಾಡಿದೆ. 70 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ 5 ಲಕ್ಷ ರೂ. ಆರೋಗ್ಯ ವಿಮಾ ಸೌಲಭ್ಯವನ್ನು ಪ್ರಧಾನಿ ಮೋದಿ ಜಾರಿಗೆ ತಂದಿದ್ದಾರೆ. ಇದರೊಂದಿಗೆ ರಿಕ್ಷಾ, ಟ್ರಕ್, ಬಸ್, ಚಾಲಕ ಹಾಗೂ ಕ್ಲೀನರ್ ಜಟ್ಕಾವಾಲಾ ಹೀಗೆ.. ಸಮಾಜದ ವಿವಿಧ ಹಂತಗಳಲ್ಲಿ ದುಡಿಯುತ್ತಿರುವ ಅನೇಕ ಉದ್ಯೋಗಿಗಳಿಗೆ ಆರೋಗ್ಯ ವಿಮೆ ಸೌಲಭ್ಯನವನ್ನು ಕಲ್ಪಿಸುವ ಮೂಲಕ ಸಮುದಾಯಕ್ಕೆ ಆರೋಗ್ಯ ಭದ್ರತೆಯನ್ನು ನೀಡಿದ್ದಾರೆ ಎಂದರು. ಅತ್ಯಂತ ಕ್ರಿಯಾಶೀಲ ಸಂಸದರಾಗಿರುವ ಬಿ.ವೈ. ರಾಘವೇಂದ್ರ ಅವರನ್ನು ಮತ್ತೊಮ್ಮೆ ಲೋಕಸಭೆಗೆ ಆಯ್ಕೆ ಮಾಡುವಂತೆ ಅವರು ಇದೇ ವೇಳೆ ಮನವಿ ಮಾಡಿದರು.