ಬೆಂಗಳೂರು: "ನಾವು ಯಾರ ಅನ್ನವನ್ನು ಕಸಿಯುತ್ತಿಲ್ಲ. ಬಿಜೆಪಿಗೆ ರಾಜಕೀಯ ಮಾಡುವುದು ಬಿಟ್ಟು ಬೇರೇನು ಕೆಲಸ" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, "ಬಿಜೆಪಿಯವರಿಗೆ ಬೇರೇನು ಕೆಲಸವಿದೆ. ನಮ್ಮ ಕ್ಷೇತ್ರದಲ್ಲೂ ಶೇ 90 ರಷ್ಟು ಹಾಗೂ ಹೊಳೆನರಸೀಪುರದಲ್ಲಿ ಶೇ 92 ಬಿಪಿಎಲ್ ಕಾರ್ಡುದಾರರಿದ್ದಾರೆ. ಹೀಗಾಗಿ ಇವುಗಳನ್ನು ಪರಿಶೀಲನೆ ಮಾಡಬೇಕಲ್ಲವೇ. ನಿಜವಾದ ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಕ್ಕಿದೆಯೇ ಇಲ್ಲವೇ ಎಂದು ನೋಡಬೇಕಾಗಿದೆ. ಕೆಲವು ಮಾನದಂಡಗಳ ಆಧಾರದ ಮೇಲೆ ಕೆಲವರ ಬಿಪಿಎಲ್ ಕಾರ್ಡ್ ರದ್ದಾಗಿವೆ" ಎಂದರು.
1 ಸಾವಿರ ಕೋಟಿ ಎಲ್ಲಿಂದ ಬಂತು?ಶಾಸಕರ ಖರೀದಿಗಾಗಿ 50 ಕೋಟಿಯಿಂದ 100 ಕೋಟಿವರೆಗೂ ಆಮಿಷ ನೀಡಲಾಗುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, "ಬಿಜೆಪಿಯವರು ಮೊದಲು ಯತ್ನಾಳ್ ಅವರ 1000 ಕೋಟಿ ಬಗ್ಗೆ ಉತ್ತರ ನೀಡಲಿ. ಆ ಹಣ ಎಲ್ಲಿಂದ ಬಂತು? ಯಾರು ಕಲೆ ಹಾಕಿ, ಯಾರಿಗೆ ಕೊಟ್ಟರು? ಈ ವಿಚಾರದಲ್ಲಿ ನಮ್ಮನ್ನು ಪ್ರಶ್ನೆ ಮಾಡುವ ಬದಲು ವಿಜಯೇಂದ್ರ ಹಾಗೂ ಅಶೋಕ್, ಎನ್ಡಿಎ ನಾಯಕರನ್ನು ಪ್ರಶ್ನೆ ಮಾಡಿ. ಅವರು ಎಲ್ಲಾ ವಿಚಾರದಲ್ಲೂ ತನಿಖೆ ಮಾಡುತ್ತಾರಲ್ಲ. ಈ ವಿಚಾರದಲ್ಲಿ ಅವರ ಪಕ್ಷದ ಆಂತರಿಕ ತನಿಖೆ ನಡೆಯಲಿ. ನಮ್ಮ ತನಿಖೆ ನಾವು ಮಾಡುತ್ತೇವೆ" ಎಂದರು.