ವಿಜಯಪುರ: ವಿಜಯಪುರ ಲೋಕಸಭಾ ಮತಕ್ಷೇತ್ರಕ್ಕೆ ಇಂದು ಮತದಾನ ನಡೆಯುತ್ತಿದ್ದು, ಜನತೆ ಬೆಳಗ್ಗೆಯಿಂದಲೇ ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದರು. ಈ ವೇಳೆ, ನಗರದ ಮತಗಟ್ಟೆಯಲ್ಲಿ ಇಂದು ವಿಧಾನಪರಿಷತ್ ಸದಸ್ಯ ಪ್ರಕಾಶ ರಾಠೋಡ್ ಅವರು ಕುಟುಂಬ ಸದಸ್ಯರೊಂದಿಗೆ ಬಂದು ಮತದಾನ ಮಾಡಿದರು. ಅಷ್ಟೇ ಅಲ್ಲ ಸ್ವಾಮೀಜಿಗಳು ಮತ್ತು ಅಭ್ಯರ್ಥಿಗಳು ಸಹ ತಮ್ಮ ಹಕ್ಕು ಚಲಾಯಿಸಿದರು.
ವಿಧಾನ ಪರಿಷತ್ ಸದಸ್ಯ ಶ್ರೀ ಪ್ರಕಾಶ್ ರಾಠೋಡ್ ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರಾದ ಡಾಕ್ಟರ್ B L ಸುಜಾತಾ ಅವರು ಬೂತ್ ನಂಬರ್ 104 ಮತ್ತು 102 ನಮ್ಮ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಮತ್ತು ಗಂಡು ಮಕ್ಕಳ ಮರಾಠ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದರು. ಜಿಲ್ಲೆಯ ಇಂಚಗೇರಿ ಮಠದ ಇಂಚಗೇರಿ ಮಠದ ರೇವಣಸಿದ್ದೇಶ್ವರ ಶ್ರೀಗಳು ಮತದಾನ ಮಾಡಿದರು. ಚಡಚಣ ತಾಲೂಕಿನ ಇಂಚಗೇರಿ ಗ್ರಾಮದ ಮಾಧವಾನಂದ ಪ್ರೌಢಶಾಲೆಯಲ್ಲಿ ಮತದಾನ ಮಾಡಿದ ಶ್ರೀಗಳು ತಮ್ಮ ಹಕ್ಕು ಚಲಾಯಿಸುವ ಮೂಲಕ ಮತದಾನದ ಮಹತ್ವ ಸಾರಿದರು.
ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ಮತದಾನ ಮಾಡಿದರು. ನಗರದ ಮದ್ದಿನ ಖಣಿಯಲ್ಲಿರುವ ಸಮನ್ವಯ ಇಂಗ್ಲಿಷ್ ಮೀಡಿಯಮ್ ಪ್ರೈಮರಿ ಬಿ ಸ್ಕೂಲ್ನಲ್ಲಿರುವ ಮತಗಟ್ಟೆ ಸಂಖ್ಯೆ 46ಕ್ಕೆ ತೆರಳಿ ಅವರು ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಬದಲಾವಣೆ ಖಚಿತ, ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಗೆಲುವು ಖಚಿತ. ಈ ಬಾರಿ ಜಿಲ್ಲೆಯಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಪ್ರೊ. ರಾಜು ಆಲಗೂರ ಗೆಲುವು ಸಾಧಿಸಿ ಸಂಸತ್ತಿನಲ್ಲಿ ವಿಜಯಪುರ ಜಿಲ್ಲೆಯ ಜನರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ವಿಜಯಪುರ ಲೋಕಸಭಾ ಮತಕ್ಷೇತ್ರದ ವಿಜಯಪುರ ನಗರದ ಮತಗಟ್ಟೆಯಲ್ಲಿ ಇಂದು ಸಚಿವ ಶಿವಾನಂದ ಪಾಟೀಲ್ ಮತದಾನ ಮಾಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಡಿಕೆಶಿ ಮೇಲೆ ಸಿಡಿ ಮಾಡಿದ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಸ್ಐಟಿ ಇದೆ, ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಎಲ್ಲವೂ ಬರುತ್ತದೆ. ಸುಮ್ಮನೇ ಊಹೆ ಮಾಡಿ ಹೇಳೋದು ಅಲ್ಲ. ಕುಂಬಳಕಾಯಿ ಕಳ್ಳ ಅಂದ್ರೆ ಬಿಜೆಪಿ ಹೆಗಲು ಮುಟ್ಟಿ ನೋಡಿಕೊಳ್ತಿದೆ. ತಪ್ಪು ಮಾಡಿದವನಿಗೆ ಶಿಕ್ಷ ಆಗಲಿ ಎನ್ನುವ ನೈತಿಕತೆ ಮಾತು ಪ್ರಧಾನಿಗಳಿಂದ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಂಗ್ಯವಾಡಿದ ಸಚಿವ ಶಿವಾನಂದ ಪಾಟೀಲ್, ಪ್ರಜ್ವಲ್ ಕೇಸ್ ಇಂಟರ್ನ್ಯಾಷನಲ್ ಸುದ್ದಿಯಾಗಿದೆ. ಹಿಂದೆ ಒಬ್ಬ ಗಾಲ್ಫ ಕ್ರೀಡಾಪಟು ಇದ್ದ, ಪ್ರಜ್ವಲ್ ಅವರನ್ನು ಮೀರಿಸಿದ್ದಾರೆ ಎಂದರು. ಇನ್ನು ಪ್ರಜ್ವಲ್ ಓಡಿ ಹೋಗಲು ಕಾಂಗ್ರೆಸ್ ಸರ್ಕಾರ ಕಾರಣ ಎಂಬ ಮೋದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿದ್ದರೇ ಮೊದಲೇ ಹಿಡಿದುಕೊಂಡು ಕೂರ್ತಿತ್ತು. ಕಾಂಗ್ರೆಸ್ ಸರ್ಕಾರದ ಕೈಯಲ್ಲಿ ವಿಮಾನ ನಿಲ್ದಾಣ ಇರೋದಿಲ್ಲ. ನೈತಿಕತೆ ಇದ್ದರೇ 24 ಗಂಟೆಯಲ್ಲಿ ಪ್ರಜ್ವಲ್ ತರಬಹುದಲ್ವಾ..?. ಕೇಂದ್ರದ ಕಡೆಗೇ ಬೊಟ್ಟು ಮಾಡಿದ ಸಚಿವ ಶಿವಾನಂದ ಪಾಟೀಲ್, ಪಾಕಿಸ್ತಾನ್ ಮೇ ಗುಸ್ ಕೋ ಮಾರೆಂಗೆ ಅನ್ತಾರೆ, ಆರ್ಡಿನರಿ ಮನುಷ್ಯನನ್ನು ಹಿಡಿಯೋಕೆ ಆಗಲ್ವಾ..?? ಎಂದು ಶಿವಾನಂದ ಪಾಟೀಲ್ ಪ್ರಶ್ನೆ ಮಾಡಿದರು.
ಇನ್ನು ನಗರದ ಮತಗಟ್ಟೆಯಲ್ಲಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಸಚಿವ ಶಿವಾನಂದ ಪಾಟೀಲ್ ಪುತ್ರಿಯಾದ ಸಂಯುಕ್ತಾ ಪಾಟೀಲ್ ಅವರು ಮತದಾನ ಮಾಡಿದರು. ಈ ಸಂದರ್ಭದಲ್ಲಿ ಅಲ್ಲಿದ್ದ ಅವರ ದೊಡ್ಡಪ್ಪ ಶಿವಶರಣಗೌಡ ಪಾಟೀಲ್ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ಓದಿ:ಲಂಡನ್-ಅಮೆರಿಕದಿಂದ ಬಂದು ತಮ್ಮ ಹಕ್ಕು ಚಲಾಯಿಸಿದ ಮತದಾರರು - NRIs VOTING IN DAVANAGERE