ಬೆಂಗಳೂರು:ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆದ ಎರಡನೇ ಹಂತದ ಮತದಾನ ಮಂಗಳವಾರ ಮುಕ್ತಾಯವಾಗಿದ್ದು, ಶೇ 70.03ರಷ್ಟು ಮತದಾನ ದಾಖಲಾಗಿದೆ. 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಚುನಾವಣೆಯಲ್ಲಿ ಶೇ 69.23ರಷ್ಟು ಮತದಾನವಾಗಿತ್ತು.
ನಿನ್ನೆಯ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆದಿದೆ. ಅಭ್ಯರ್ಥಿಗಳ ಭವಿಷ್ಯ ಇದೀಗ ಇವಿಎಂಗಳಲ್ಲಿ ಭದ್ರವಾಗಿ ಸ್ಟ್ರಾಂಗ್ ರೂಂ ಸೇರಿದೆ.
2019ರ ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ನಡೆದ ಮತದಾನ ಪ್ರಮಾಣಕ್ಕಿಂತ ಈ ಬಾರಿ ಶೇಕಡಾವಾರು ಪ್ರಮಾಣ ಅಧಿಕವಾಗಿದೆ. ಕಳೆದ ಚುನಾವಣೆಯಲ್ಲಿ ಶೇ.68.66ರಷ್ಟು ಮತದಾನವಾಗಿದ್ದರೆ, ಈ ಬಾರಿ ಶೇ.70.03 ಮತದಾನವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.
21 ಮಹಿಳೆಯರು ಸೇರಿದಂತೆ ಒಟ್ಟು 227 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದಾರೆ. ಇಬ್ಬರು ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ನಾಲ್ವರು ಸಚಿವರ ಮಕ್ಕಳು, ಓರ್ವ ಸಚಿವರ ಸಹೋದರಿ, ಸಚಿವರೊಬ್ಬರ ಪತ್ನಿ, ಹಾಲಿ ಸಂಸದರ ಪತ್ನಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ಚುನಾವಣಾ ಕಣದಲ್ಲಿದ್ದಾರೆ.
ಎಲ್ಲಿ, ಎಷ್ಟು ಮತದಾನ?:
ಕ್ರ.ಸಂಖ್ಯೆ | ಕ್ಷೇತ್ರ | ಶೇಕಡಾ ಮತದಾನ |
1. | ಚಿಕ್ಕೋಡಿ | 76.99 |
2. | ಬೆಳಗಾವಿ | 71.00 |
3. | ಬಾಗಲಕೋಟೆ | 70.10 |
4. | ವಿಜಯಪುರ | 64.71 |
5. | ಕಲಬುರಗಿ | 61.73 |
6. | ರಾಯಚೂರು | 64.10 |
7. | ಬೀದರ್ | 63.55 |
8. | ಕೊಪ್ಪಳ | 69.87 |
9. | ಬಳ್ಳಾರಿ | 72.35 |
10. | ಹಾವೇರಿ | 76.78 |
11. | ಧಾರವಾಡ | 72.53 |
12. | ಉತ್ತರ ಕನ್ನಡ | 73.52 |
13. | ದಾವಣಗೆರೆ | 76.23 |
14. | ಶಿವಮೊಗ್ಗ | 76.05 |