ಹಾವೇರಿ:ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿವೆ. ಕಾಂಗ್ರೆಸ್‌ನಿಂದ ಆನಂದಸ್ವಾಮಿ ಗಡ್ಡದೇವರಮಠ ಸ್ಪರ್ಧಿಸುತ್ತಿದ್ದಾರೆ. ಇತ್ತ ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಣಕ್ಕಿಳಿದಿದ್ದಾರೆ. ಚುನಾವಣಾ ನೀತಿ ಸಂಹಿತೆ ಪ್ರಕಟವಾಗುವ ಮುನ್ನವೇ ಅಭ್ಯರ್ಥಿಗಳು ಮತ ಭೇಟೆಗೆ ಸಿದ್ಧತೆ ನಡೆಸಿದ್ದಾರೆ.
ಈ ಮಧ್ಯೆ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪತ್ನಿ ದೀಪಾ ಧಾರ್ಮಿಕ ಕಾರ್ಯಕ್ರಮದ ಮೂಲಕ ತಮ್ಮ ಪತಿ ಪರ ಮತಯಾಚನೆ ಮಾಡಿದ್ದಾರೆ. ಹಾವೇರಿಯ ಹುಕ್ಕೇರಿಮಠದಲ್ಲಿ ಆಯೋಜಿಸಲಾಗಿದ್ದ ಲಲಿತ ಸಹಸ್ರನಾಮ ಪೂಜಾ ಕಾರ್ಯಕ್ರಮದಲ್ಲಿ ದೀಪಾ ಗಡ್ಡದದೇವರಮಠ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅರಿಷಿಣ ಕುಂಕುಮ ಹಚ್ಚಿ ಉಡಿ ತುಂಬಿದರು. ಜೊತೆಗೆ ತಮ್ಮ ಪತಿ ಆನಂದಸ್ವಾಮಿ ಗಡ್ಡದೇವರಮಠ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದು ತಾವೆಲ್ಲ ಅವರಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ಬಳಿಕ ದೀಪಾ ಗಡ್ಡದದೇವರಮಠ ಅವರಿಗೆ ಮಹಿಳೆಯರು ಸಹ ಉಡಿ ತುಂಬಿದರು. ಅರಿಷಿಣ ಕುಂಕುಮ ಹಚ್ಚಿ ದೀಪಾ ಆಸೆಗಳು ಈಡೇರಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದೀಪಾ ಗಡ್ಡದದೇವರಮಠ, 'ಚುನಾವಣೆ ಟಿಕೆಟ್ ಪ್ರಕಟಿಸುವ ಮುನ್ನ ತಮ್ಮ ಲಿಂಗಯ್ಯ ಟ್ರಸ್ಟ್ ಹಲವು ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಹಾವೇರಿ ಜಿಲ್ಲೆ ಸೇರಿದಂತೆ ಲೋಕಸಭೆ ಕ್ಷೇತ್ರದ ವಿವಿಧೆಡೆ ಲಿಂಗಯ್ಯ ಟ್ರಸ್ಟ್ ಹಲವು ಪೂಜಾ ಕಾರ್ಯಕ್ರಮ ಆಯೋಜಿಸುತ್ತಾ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹಾವೇರಿಯ ಹುಕ್ಕೇರಿಮಠದಲ್ಲಿ ಲಲಿತ ಸಹಸ್ರಾನಾಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಿಳೆಯರಿಗೆ ಉಡಿ ತುಂಬಿದ್ದು ಹೆಚ್ಚು ಸಂತಸವಾಯಿತು' ಎಂದು ತಿಳಿಸಿದರು.