ಕಾರವಾರ(ಉತ್ತರ ಕನ್ನಡ): ಕಳೆದೊಂದು ತಿಂಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದ್ದಾರೆ. ಆದರೆ ಪ್ರತೀ ಬಾರಿ ಕಾಂಗ್ರೆಸ್‌ನ ಹಿನ್ನಡೆಗೆ ಕಾರಣವಾಗುತ್ತಿದ್ದ ಕಿತ್ತೂರು, ಖಾನಾಪುರ ಭಾಗದ ಮತಗಳನ್ನು ಸೆಳೆದು ಗೆಲುವಿಗೆ ಹಂಬಲಿಸಿದ್ದ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದ್ದು, ಡಾ.ಅಂಜಲಿ ನಿಂಬಾಳ್ಕರ್ ತವರು ಕ್ಷೇತ್ರ ಸೇರಿದಂತೆ 8 ಕ್ಷೇತ್ರಗಳಲ್ಲಿಯೂ ಹಿನ್ನಡೆ ಪಡೆದು ತೀವ್ರ ಮುಖಭಂಗ ಅನುಭವಿಸಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ 7,82,495 ಮತಗಳನ್ನು ಪಡೆದುಕೊಂಡಿದ್ದು, ಕಾಂಗ್ರೆಸ್‌ನ ಡಾ.ಅಂಜಲಿ ನಿಂಬಾಳ್ಕರ್ ಕೇವಲ 4,45,067 ಮತಗಳನ್ನು ಪಡೆದುಕೊಂಡಿದ್ದಾರೆ. ಎರಡೂವರೆ ಲಕ್ಷ ಅಂತರದ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಗೇರಿ 3,37,428 ಭಾರೀ ಮತಗಳ ಅಂತರದಿಂದ ಗೆದ್ದಿರುವುದು ಅವರ ಖುಷಿ ಹೆಚ್ಚಿಸುವಂತೆ ಮಾಡಿದೆ. ಆದರೆ ಕಡಿಮೆ ಮತಗಳ ಅಂತರದಲ್ಲಾದರೂ ಗೆದ್ದೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಪಾಲಿಗೆ ಭಾರಿ ಮತಗಳ ಅಂತರದ ಸೋಲು ಇದೀಗ ಪರಾಮರ್ಶೆ ಮಾಡಿಕೊಳ್ಳುವಂತೆ ಮಾಡಿದೆ.
ಕಳೆದ ಮೂರು ದಶಕಗಳ ಹಿಂದೆ ಕೈ ಜಾರಿದ್ದ ಉತ್ತರಕನ್ನಡ ಲೋಕಸಭಾ ಕ್ಷೇತ್ರಗಳ ಗೆಲುವಿಗೆ ಎಷ್ಟೇ ಪ್ರಯತ್ನಪಟ್ಟರೂ ಬಣ ರಾಜಕೀಯ ಸೇರಿದಂತೆ ಇತರ ಕಾರಣಗಳಿಂದ ಪ್ರತಿಬಾರಿ ಕೈತಪ್ಪುವಂತೆ ಮಾಡಿತ್ತು. ಆದರೆ ಈ ಬಾರಿ ಜಿಲ್ಲೆಯವರನ್ನು ಕೈ ಬಿಟ್ಟ ಕಾಂಗ್ರೆಸ್ ಉತ್ತರಕನ್ನಡ ಲೋಕಸಭಾ ಕ್ಷೇತ್ರಕ್ಕೊಳಪಟ್ಟಿರುವ ಬೆಳಗಾವಿಯ ಖಾನಾಪುರದ ಡಾ.ಅಂಜಲಿ ನಿಂಬಾಳ್ಕರ್ಗೆ ಟಿಕೆಟ್ ನೀಡಿತ್ತು.
ಈ ಮೂಲಕ ಪ್ರತಿಬಾರಿ ಕಿತ್ತೂರು ಖಾನಾಪುರ ಭಾಗದಲ್ಲಿನ ಹಿನ್ನಡೆಯನ್ನು ತಪ್ಪಿಸಿ ಮಾಡಿದ ಪ್ಲ್ಯಾನ್ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ 59,830 ಮತಗಳು ಹಾಗೂ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿಯೇ 36,242 ಮತಗಳ ಭಾರಿ ಹಿನ್ನಡೆ ಅನುಭವಿಸಿದ್ದಾರೆ.